ಗೃಹಸಚಿವರ ತವರಲ್ಲಿ ಸಿಕ್ಕ ಮಹಿಳೆಯ ಅಂಗಾಂಗ ಪ್ರಕರಣದಲ್ಲಿ ಟ್ವಿಸ್ಟ್?
ಕವರ್‌ಗಳಲ್ಲಿ ದೇಹ, ಕಬ್ಬಿಣದ ಪೀಸ್ ಪತ್ತೆ!
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಕೊಲಾಲ ಗ್ರಾಮದಲ್ಲಿ ಆಗಸ್ಟ್ 7, 2025 ರಂದು ಆರಂಭವಾದ ಭಯಾನಕ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಮಹಿಳೆಯೊಬ್ಬರ ಛಿದ್ರಗೊಂಡ ಅಂಗಾಂಗಗಳು 10 ಕ್ಕೂ ಹೆಚ್ಚು ಸ್ಥಳಗಳಲ್ಲಿ, 11 ಪ್ಲಾಸ್ಟಿಕ್ ಕವರ್‌ಗಳಲ್ಲಿ ಪತ್ತೆಯಾಗಿತ್ತು. ಇದೀಗ ಈ ಘಟನೆಯಲ್ಲಿ ವಾಮಚಾರದ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಭಯಾನಕ ಕೊಲೆ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣ ಗೃಹಸಚಿವರ ತವರು ಜಿಲ್ಲೆಯಲ್ಲಿ ನಡೆದಿದ್ದು, ತುಮಕೂರು ಜನರಲ್ಲಿ ಭಾರೀ ಆತಂಕವನ್ನುಂಟು ಮಾಡಿದೆ. ಬರೋಬ್ಬರಿ 11 ಪ್ಲಾಸ್ಟಿಕ್ ಕವರ್‌ಗಳಲ್ಲಿ ಮಹಿಳೆಯ ಅಂಗಾಂಗಳು ಪತ್ತೆಯಾಗಿದ್ದು, ಅಲ್ಲದೇ ಎರಡೆರಡು ಕಬ್ಬಿಣದ ಪೀಸ್‌ಗಳು ಪತ್ತೆಯಾಗಿವೆ, ಒಂದು ಕವರ್‌ನಲ್ಲಿ ಮಾತ್ರ ಮೂರು ಕಬ್ಬಿಣದ ಪೀಸ್ ಪತ್ತೆಯಾಗಿದೆ.
11 ಕವರ್‌ಗಳಲ್ಲಿ ಅಂಗಾಂಗ ಪತ್ತೆ!
ಆಗಸ್ಟ್ 7 ರಂದು ಗೃಹ ಸಚಿವ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನ ಕೊರಟಗೆರೆಯ ಚಿಂಪುಗನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿ ಒಂದು ಶ್ವಾನ ಕತ್ತರಿಸಿದ ಮಾನವ ಕೈಯನ್ನು ಎಳೆದುಕೊಂಡು ಬಂದಾಗ ಈ ಗುಟ್ಟು ಬಯಲಿಗೆ ಬಂದಿತು. ಮತ್ತೊಂದು ಕೈ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಪತ್ತೆಯಾಯಿತು. ನಂತರ, ಲಿಂಗಾಪುರ ರಸ್ತೆ ಸೇತುವೆ, ಬೆಂಡೋನ್ ನರ್ಸರಿ, ಜೋನಿಗರಹಳ್ಳಿ, ಮತ್ತು ಸಿದ್ದಾರಬೆಟ್ಟ ರಸ್ತೆಯ ಒಟ್ಟು 10 ಸ್ಥಳಗಳಲ್ಲಿ ಕತ್ತರಿಸಿದ ಅಂಗಾಂಗಗಳು, ಒಳಗಿರುವ ಜೀರ್ಣಾಂಗಗಳು, ಮತ್ತು ತಲೆ ಸೇರಿದಂತೆ ಒಟ್ಟು 11 ಕವರ್‌ಗಳಲ್ಲಿ ಶವದ ಭಾಗಗಳು ದೊರೆತಿವೆ.
25 ಕಬ್ಬಿಣದ ತುಂಡುಗಳು ಪತ್ತೆ!
ಇನ್ನೂ ಆಶ್ಚರ್ಯಕರವಾಗಿ, 11 ಕವರ್‌ಗಳಲ್ಲಿ 25 ಕಬ್ಬಿಣದ ತುಂಡುಗಳು ಪತ್ತೆಯಾಗಿವೆ, ಇದು ವಾಮಚಾರದ ಸಾಧ್ಯತೆಯನ್ನು ಬಲಪಡಿಸಿದೆ. ಆದರೆ, ಸೊಂಟದಿಂದ ಮೊಳಕಾಲಿನವರೆಗಿನ ಭಾಗಗಳು ಮತ್ತು ಎರಡು ಪಾದಗಳ ಅರ್ಧ ಕತ್ತರಿಸಿದ ಬೆರಳುಗಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಈ ಶವವನ್ನು ಬೆಳ್ಳಾವಿಯ ಲಕ್ಷ್ಮೀದೇವಮ್ಮ (42) ಎಂದು ಗುರುತಿಸಿದ್ದಾರೆ, ಆದರೆ ಡಿಎನ್‌ಎ ಪರೀಕ್ಷೆಯಿಂದ ಖಚಿತತೆಗಾಗಿ 15 ದಿನಗಳ ಕಾಲ ಕಾಯಬೇಕಿದೆ.