ಮಂಗಳೂರು: ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ 11 ದಿನದಿಂದ ದೂರುದಾರ ನಿತ್ಯ ಒಂದೊAದು ಜಾಗ ತೋರಿಸುತ್ತಾ ಇದಲ್ಲ ಅದು, ಅದಲ್ಲ ಮತ್ತೊಂದು ಎಂದು ಅಧಿಕಾರಿಗಳಿಗೆ ದಾರಿ ತಪ್ಪಿಸುತ್ತಿದ್ದಾನೋ ಗೊತ್ತಿಲ್ಲ. ಎಸ್‌ಐಟಿ ಅವರು ದೂರುದಾರ ಹೇಳಿದ ಎಲ್ಲಾ ಸ್ಥಳಗಳನ್ನ ಅಗೆದರೂ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ. ಆದರೂ ದೂರುದಾರ ತೋರಿಸುವ ಎಲ್ಲಾ ಸ್ಥಳಗಳನ್ನು ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇಂದು ಕಾರ್ಯಾಚರಣೆ ಸ್ಥಗಿತ ಮಾಡಲಿರುವ ಎಸ್‌ಐಟಿ ನಾಳೆಯೂ ಕಾರ್ಯಾಚರಣೆ ಮುಂದುವರಿಸಲಿದೆ.
11 ದಿನದಲ್ಲಿ 16ಕ್ಕೂ ಹೆಚ್ಚು ಜಾಗ ತೋರಿಸಿದ ಸ್ಥಳಗಳಲ್ಲಿ ಕಳೇಬರ ಬಿಟ್ಟು ಸಿಕ್ಕಿದ್ದು ಕಲ್ಲು–ಮಣ್ಣು–ಬಂಡೆ ಬಿಟ್ರೆ ಬೇರೇನೂ ಅಲ್ಲ. ಶನಿವಾರ ಸಹ ಮಳೆ ಮಧ್ಯೆ ಕಾಡಿಗೆ ಊಟ ತರಿಸಿಕೊಂಡು 7 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಲಾಯಿತು. ಪಾಯಿಂಟ್ 16 ಹಾಗೂ 16(ಎ) ಎಂದು 2 ಜಾಗ ಸೇರಿ 20 ಅಡಿ ಅಗಲ 10 ಅಡಿ ಆಳ ತೋಡಿದರೂ ಕೂಡ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಇದರ ಮಧ್ಯೆ ಅನಾಮಿಕ ಜಾಗ ಬದಲಿಸುತ್ತಿರುವುದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.
ಇನ್ನು ಆ ಅನಾಮಿಕ ಶನಿವಾರ ತೋರಿಸಿದ ಜಾಗ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಧರ್ಮಸ್ಥಳದ ಧಾರ್ಮಿಕ ಕ್ಷೇತ್ರದ ದ್ವಾರಬಾಗಿಲಿನ ಪಕ್ಕದ ಬಾಹುಬಲಿ ಬೆಟ್ಟದ ರಸ್ತೆ ಪಕ್ಕದಲ್ಲೇ ಹೆಣ ಹೂತಿರೋದಾಗಿ ಲೊಕೇಶನ್ ಮಾರ್ಕ್ ಮಾಡಿದ್ದಾನೆ. ಹಾವು–ಬಳುಕಿನ ಮೈಕಟ್ಟು ರಸ್ತೆಯಲ್ಲಿ ದಶಕಗಳ ಹಿಂದೆ ಹೂತ ಹೆಣದ ಜಾಗವನ್ನ ಅದೇ ಮರ ನಿಲ್ಸಿ ಅಂತ ತಟ್ಟನೇ ಗಾಡಿ ನಿಲ್ಲಿಸಿದ್ದಾನೆ. ಮೊದಲ 10 ದಿನದ 15 ಜಾಗವೂ ಕಾಡಿನ ಪ್ರದೇಶ. ಆದರೆ ಮೊದಲ ಬಾರಿಗೆ ನಿತ್ಯ ಹಗಲಿರುಳು ನೂರಾರು ಗಾಡಿ ಓಡಾಡುವ ರೋಡ್ ಪಕ್ಕವೇ ಜಾಗ ತೋರಿಸಿದ್ದ. ಆದರೆ ಅಲ್ಲೂ ಏನು ಸಿಗಲಿಲ್ಲ.
ಒಟ್ಟಾರೆ, 11 ದಿನದಲ್ಲಿ 16 ಜಾಗ ಅಗೆದಿರೋ ಅಧಿಕಾರಿಗಳಿಗೆ ಅನಾಮಿಕ ಹೇಳಿದ ರೀತಿ ಒಂದು ತಲೆಗೂದಲೂ ಸಿಕ್ಕಿಲ್ಲ. ಹೀಗಾಗಿ, ಈತನ ನಡೆ ಮೇಲೆ ಅನುಮಾನ ಮೂಡಿದಂತಿದೆ. ಭಾನುವಾರವಾದ ಕಾರಣ ಎಸ್‌ಐಟಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ. ಸೋಮವಾರವಾದರೂ ಏನಾದರೂ ಸಿಗುತ್ತಾ ಎಂದು ಕಾದುನೋಡಬೇಕಿದೆ.