ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಎಸ್ಐಟಿ ರಚನೆ ಮಾಡಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಮನವಿ
ದತ್ತಪೀಠ ಹಿಂದೂಗಳ ಪೀಠ ದತ್ತಾತ್ರೇಯ ಸ್ವಾಮಿ ತಪಸ್ಸು ಮಾಡಿದ ಜಾಗ. ನಕಲಿ ಗೋರಿ ನಿರ್ಮಿಸಿದ್ದು ಈ ಬಗ್ಗೆ ಸತ್ಯ ತಿಳಿಯಲು ಜಿಪಿಎಸ್ ಆಧುನಿಕ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಹಿಂದೂ ಸಂಘಟನೆ ಮುಖಂಡ ರಘು ಸಕಲೇಶಪುರ ಮನವಿ ಮಾಡಿದ್ದಾರೆ.
2017ರ ಡಿಸೆಂಬರ್ 3 ರಂದು ದತ್ತ ಜಯಂತಿ ದಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ್ದ ಘಟನೆ ನಡೆದಿತ್ತು. ಈ ಕುರಿತಾಗಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಸುಮಾರು 14 ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು.
ಅದೇ ರೀತಿಯಾಗಿ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ, ಪೂಜೆ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆರೋಪಗಳು ಕೇಳಿಬಂದಿದ್ದವು. ಘಟನೆ ಖಂಡಿಸಿ ಶಾಖಾದ್ರಿ ಕುಟುಂಬಸ್ಥರು ದರ್ಗಾದ ಎದರು ಪ್ರತಿಭಟನೆ ಮಾಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಖಾದ್ರಿ ಕುಟುಂಬಸ್ಥರು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ಮಧ್ಯೆ ವಾಗ್ವಾದ ಕೂಡ ನಡೆದಿತ್ತು. ಮುಸ್ಲಿಂ ಮುಖಂಡರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.