ಚಾಮರಾಜನಗರ: ಮಲೆ ಮಾದಪ್ಪನಿಗೆ ಭಕ್ತ ವೃಂದ ಅಪಾರ. ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯದಿಂದಲೂ ಮಾದಪ್ಪನ ದರ್ಶನ ಪಡೆಯಲು ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತವೃಂದಕ್ಕೆ ಮೂಲಭೂತ ಸೌಕರ್ಯ ನೀಡುವುದು ಪ್ರಾಧಿಕಾರದ ಆದ್ಯ ಕರ್ತವ್ಯ. ಹಾಗಾಗಿ ದೂರದ ಊರಿನಿಂದ ಬರುವ ಭಕ್ತರು ವಿಶ್ರಮಿಸಲು ಕೊಠಡಿಗಳ ಕೊರತೆ ಇರುವ ಕಾರಣ 5 ಮಹಡಿಯ 376 ಕೊಠಡಿಗಳ `ವಜ್ರಮಲೆ ಭವನ’ ನರ್ಮಾಣ ಮಾಡಲಾಗಿತ್ತು. ಇದನ್ನ ಏಪ್ರಿಲ್ ತಿಂಗಳಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉದ್ಘಾಟನೆಯನ್ನೂ ಮಾಡಿದ್ದರು. ಆದರೂ ಭಕ್ತರ ಬಳಕೆಗೆ ನೀಡದೇ ಇರುವುದು ಆಕ್ರೋಶಕ್ಕೆ ಗುರಿಯಾಗಿದೆ.
ಈ ನೂತನ ವಜ್ರಮಲೆ ಭವನದಲ್ಲಿ ಬರೋಬ್ಬರಿ 8 ವಿವಿಐಪಿ ಕೊಠಡಿಗಳಿದ್ದು ಕೇವಲ ಈ ಕೊಠಡಿಗಳಿಗೆ ಮಾತ್ರ ಎಸಿ ಸೇರಿದಂತೆ ಮಂಚ ಸೋಫಾ ಹಾಗೂ ಎಲ್ಲಾ ರೀತಿಯ ವ್ಯವಸ್ಥೆ ಅಳವಡಿಸಲಾಗಿದೆ. ಇನ್ನುಳಿದ ಸಾಮಾನ್ಯ ಕೊಠಡಿಗಳಿಗೆ ಇನ್ನೂ ಪೀಠೋಪಕರಣಗಳನ್ನು ಅಳವಡಿಸಲಾಗಿಲ್ಲ.
ಎಷ್ಟೊ ಮಂದಿ ಭಕ್ತರು ದೂರದ ಊರಿನಿಂದ ಬಂದು ವಾಸ್ಥವ್ಯ ಸಿಗದೆ ಕೊನೆಗೆ ಖಾಸಗಿ ಲಾಡ್ಜ್ಗಳಲ್ಲಿ ಹೆಚ್ಚಿನ ಹಣ ಕೊಟ್ಟು ತಂಗುವಂತಹ ಅನಿವಾರ್ಯತೆ ಎದುರಾಗಿದೆ. ಕೈಯಲ್ಲೇ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ತಿರುಗಿದರು ಎನ್ನುವಂತಾಗಿದೆ ಎಂದು ಭಕ್ತ ಮಹದೇವ ಕಣ್ಣನ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಆರಂಭ ಶೂರತ್ವದಂತೆ ಕೆಲಸ ಕರ್ಯ ಆರಂಭಿಸಿ ಬಳಿಕ ಯಾರಿಗೂ ಪ್ರಯೋಜನಕ್ಕೆ ಬಾರದೆ ಇರುವ ರೀತಿ ಮಾಡಿದ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ನಡೆ ಈಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.