ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಇಂದು ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಅಲರ್ಟ್ ನೀಡಿದೆ.
ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದಲೂ ಮಳೆಯ ಅಬ್ಬರ ಜೋರಾಗಿದೆ. ಮಳೆಯ ಅಬ್ಬರಕ್ಕೆ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜೀವ ನದಿಗಳಾದ ತುಂಗಾ ಭದ್ರ ಕೂಡ ತುಂಬಿ ಹರಿಯುತ್ತಿದ್ದು ನದಿಗಳೆಲ್ಲ ಅಪಾಯದ ಮುನ್ಸೂಚನೆ ನೀಡ್ತಾ ಇವೆ. ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಇದರ ಎಫೆಕ್ಟ್ ದಕ್ಷಿಣ ಒಳನಾಡು ಜಿಲ್ಲೆಗಳ ಮೇಲೆ ಪ್ರಭಾವ ಬೀರಿದೆ.
ಕೊಪ್ಪ, ಶೃಂಗೇರಿ ನರಸಿಂಹರಾಜಪುರ, ಮೂಡಿಗೆರೆ, ಕಳಸ ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಭಾರೀ ಮಳೆಯಲಾಗಿದೆ. ಅಲ್ಲದೆ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸೆಪ್ಟೆಂಬರ್ 3ರವರೆಗೆ ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 2ರಿಂದ ಮಳೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಮಳೆಯು ಸೆಪ್ಟೆಂಬರ್ 6ರ ತನಕ ಇರಲಿದ್ದು, ನಂತರ ಕಡಿಮೆಯಾಗುವ ಲಕ್ಷಣಗಳಿವೆ.
ಕೊಡಗು, ಹಾಸನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದರೆ, ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಸೆಪ್ಟೆಂಬರ್ 2ರಿಂದ ಮಳೆ ಸ್ವಲ್ಪ ಹೆಚ್ಚಾಗುವ ಮುನ್ಸೂಚನೆಗಳಿವೆ.
ಉತ್ತರ ಒಳನಾಡಿನ ಧಾರವಾಡ ಹಾವೇರಿ, ಗದಗ, ವಿಜಯನಗರ, ದಾವಣಗೆರೆ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಸೆಪ್ಟೆಂಬರ್ 4ರ ತನಕ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಉತ್ತರ ಥೈಲಾಂಡ್ ನಲ್ಲಿ ಈಗಾಗಲೇ ವಾಯುಭಾರ ಕುಸಿತ ಉಂಟಾಗಿದ್ದು, ಸೆಪ್ಟೆಂಬರ್ 2ರ ವೇಳೆಗೆ ಒಡಿಸ್ಸಾ ಕರಾವಳಿ ತಲಪುವ ನಿರೀಕ್ಷೆಯಿದೆ. ಇದರ ಪರಿಣಾಮದಿಂದ ರಾಜ್ಯದ ಕರಾವಳಿಯಲ್ಲಿ ಮಳೆ ಹೆಚ್ಚಾಗುವ ಸೂಚನೆಗಳಿವೆ.