Ad image

ಆರೋಗ್ಯದ ಕಡೆ ಕಾಳಜಿ ವಹಿಸಿ; ಸುನಿಲ್ ಬೋಸ್

Team SanjeMugilu
2 Min Read
ಕೊಳ್ಳೇಗಾಲ: ಒತ್ತಡದ ಕೆಲಸದಿಂದ ಹಲವರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಸಂಸದ ಸುನಿಲ್ ಬೋಸ್ ಅವರ ಅಪ್ಪಟ ಅಭಿಮಾನಿ ಹಾಗೂ ಆರೋಗ್ಯ ಶಿಬಿರದ ಆಯೋಜಕ ಡಾ.ಗುರುಮೂರ್ತಿ ಹೇಳಿದರು.
ನಗರದ ಮುಡಿಗುಂಡದ ಜೆ ಎಸ್ ಎಸ್ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಚಾಮರಾಜನಗರ ಸಂಸದ ಸುನಿಲ್ ಬೋಸ್ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಅವರು ಉದ್ಘಾಟನೆ ಮಾಡಿ ನಂತರ ಮಾತನಾಡಿದರು.
ಬದಲಾದ ಜೀವನ ಶೈಲಿ ಮತ್ತು ಒತ್ತಡದ ಬದುಕಿನಲ್ಲಿ ಜನರ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಎಚ್ಚರವಹಿಸಿದರೆ ಸಾಕು ಅವರು ಉತ್ತಮ ಜೀವನ ನಡೆಸಬಹುದು. ಎಷ್ಟೇ ಹಣ ಆಸ್ತಿ ಸಂಪಾದನೆ ಮಾಡಬಹುದು ಆದರೆ ಆರೋಗ್ಯವನ್ನು ಸಂಪಾದನೆ ಮಾಡುವುದು ಬಹಳ ಕಷ್ಟ. ಹಾಗಾಗಿ ಮನುಷ್ಯನಿಗೆ ಯಾವುದೇ ಕಾಯಿಲೆ ಬಂದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಆಗ ನಿಮ್ಮ ಆರೋಗ್ಯದ ಸಮಸ್ಯೆಯಿಂದ ದೂರ ಉಳಿಯಬಹುದು ಇಲ್ಲದಿದ್ದರೆ ತುಂಬಾ ಕಷ್ಟಕರವಾಗುತ್ತದೆ. ಅಪೌಷ್ಟಿಕ ಆಹಾರ ಸೇವನೆಯಿಂದ ರೋಗಗಳು ಮನುಷ್ಯನ ದೇಹ ಸೇರುತಿದೆ ಹೀಗಾಗಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ವೃದ್ಧರಲ್ಲಿ ಅನಾರೋಗ್ಯ ಸಮಸ್ಯೆಗಳನ್ನು ಸಾಮಾನ್ಯವಾಗಿ ಕಾಣಬಹುದು ಹಾಗಾಗಿ ಈ ನಿಟ್ಟಿನಲ್ಲಿ ವೃದ್ಧರು ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಇನ್ನಿತರ ಕಡೆ ನಡೆಯುವ ಆರೋಗ್ಯ ಮೇಳವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು. ದೇಹದ ಯಾವುದೇ ಭಾಗದಲ್ಲಿ ನೋವು ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕ ಮಾಡಬೇಕು ಯಾವುದೇ ನೋವುಗಳನ್ನು ಅಲಕ್ಷ ಮಾಡಬಾರದು ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಆರೋಗ್ಯ ಸರಿ ಇದ್ದರೆ ಜೀವನ ಆನಂದಮಯವಾಗಿರುತ್ತದೆ. ಹಾಗಾಗಿ ಚಾಮರಾಜನಗರ ಸಂಸದ ಸುನಿಲ್ ಬೋಸ್ ಅವರ 44ನೇ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಯಾಗಿ ನಾನು ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ನಡೆಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ಇನ್ನೂ ವಿನೂತನ ಕಾರ್ಯಕ್ರಮಗಳನ್ನು ಮಾಡಿ ಜನಸೇವೆ ಮಾಡಬೇಕು ಎಂಬುದಾಗಿ ಅಂದುಕೊಂಡಿದ್ದೇನೆ. ಸಂಸದರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಸಂಸದರ ದೂರವಾಣಿಯ ಮೂಲಕ ಕರೆ ಮಾಡಿ ಆರೋಗ್ಯ ಮೇಳವನ್ನು ಯಶಸ್ವಿಯಾಗಿ ನಡೆಸಿ ಮುಂದಿನ ದಿನಗಳಲ್ಲಿ ಯಾರಿಗೆ ಯಾವುದೇ ಸಹಾಯ ಬೇಕಾದರೂ ನನ್ನ ಬಳಿಗೆ ನೇರವಾಗಿ ಕರೆದುಕೊಂಡು ಬನ್ನಿ ನಾನು ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಹಾಗೂ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ನನಗೆ ಹೇಳಿದರು. ಹಾಗಾಗಿ ಮುಂದಿನ ದಿನಗಳಲ್ಲಿ ಅವರ ಅಭಿಮಾನಿಗಳು ಇನ್ನೂ ಹೆಚ್ಚಿನ ಜನಸೇವೆ ಮಾಡುತ್ತೇವೆ ಎಂದರು.
ಶಿಬಿರದಲ್ಲಿ ನಾರಾಯಣ  ಆಸ್ಪತ್ರೆ, ಕ್ಲಿಯರ್ ಮೆಡಿ ಆಸ್ಪತ್ರೆ, ನಂದನ್ ಕಣ್ಣಿನ ಆಸ್ಪತ್ರೆ, ಹೊಲೀ ಕ್ರಾಸ್ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಿಂದ  ನುರಿತ ವೈದ್ಯರುಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 477  ಮಂದಿ ಭಾಗವಹಿಸಿ ವೈದ್ಯರಿಂದ ಸಲಹೆಗಳನ್ನು ಪಡೆದರು 35 ಮಂದಿ ಯುವಕರು ರಕ್ತದಾನ ಮಾಡಿದರು.
ಶಿಬಿರದಲ್ಲಿ ಶಂಕರ್, ಜಗದೀಶ್, ಮದನ್, ಅಶೋಕ್, ನಿಂಗರಾಜು, ಚೇತನ್, ರಾಘವೇಂದ್ರ, ಪ್ರೀತಮ್, ಸುದೀಪ್ ಸೇರಿದಂತೆ ಇತರರು ಇದ್ದರು.
Share This Article