ಬಕ್ಸಾರ್ (ಬಿಹಾರ): ಜಿಲ್ಲೆಯ ದಹಿವರ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಪಾಸ್ತಾ ತಿಂದು 5 ವರ್ಷದ ಮಗು ಮತ್ತು 35 ವರ್ಷದ ಆತನ ತಂದೆ ಸಾವನ್ನಪ್ಪಿದ್ದಾರೆ. ಜೊತೆಗೆ, ಮೃತ ವ್ಯಕ್ತಿಯ ಪತ್ನಿ ಮತ್ತು ಮತ್ತಿಬ್ಬರು ಮಕ್ಕಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರು ನೀಡಿದ ಮಾಹಿತಿಯ ಪ್ರಕಾರ, ಮೃತರು ಮತ್ತು ಅನಾರೋಗ್ಯಕ್ಕೆ ತುತ್ತಾದವರು ಒಂದೇ ಕುಟುಂಬದವರಾಗಿದ್ದಾರೆ. ಎಲ್ಲರೂ ಇಲ್ಲಿನ ಫಾಸ್ಟ್ ಫುಡ್ ಸೆಂಟರ್ ನಲ್ಲಿ ಪಾಸ್ತಾ ತಿಂದರು. ನಂತರ ಹಾಲು ಕುಡಿದರು. ನಂತರ ಎಲ್ಲರ ಸ್ಥಿತಿ ಗಂಭೀರವಾಯಿತು. ಸ್ವಲ್ಪ ಸಮಯದ ನಂತರ ತಂದೆ ಮತ್ತು ಮಗ ಮೃತಪಟ್ಟರು. ಉಳಿದವರು ತೀವ್ರ ಅನಾರೋಗ್ಯಕ್ಕೆ ತುತ್ತಾದರು ಎಂದು ತಿಳಿಸಿದ್ದಾರೆ.
ದಹಿವರ್ ಗ್ರಾಮದ ಕುಶ್ವಾಹ ಟೋಲಾ ನಿವಾಸಿ ಕಿಶುನ್ ಮಹಾತೋ (35 ವರ್ಷ) ಅವರ ಅವಿಭಕ್ತ ಕುಟುಂಬವು 9 ಸದಸ್ಯರನ್ನು ಹೊಂದಿದೆ. ಸೋಮವಾರ ರಾತ್ರಿ ಇಬ್ಬರು ಸದಸ್ಯರನ್ನು ಹೊರತುಪಡಿಸಿ, ಮಕ್ಕಳು ಸೇರಿದಂತೆ ಏಳು ಮಂದಿ ಫಾಸ್ಟ್ ಫುಡ್ ಸೆಂಟರ್ ನಲ್ಲಿ ಪಾಸ್ತಾ ತಿಂದ ಬಳಿಕ ಅನಾರೋಗ್ಯ ಕಾಣಿಸಿಕೊಂಡಿದೆ. ಎಲ್ಲರನ್ನೂ ಬಕ್ಸಾರ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಕಿಶುನ್ ಮಹಾತೋ ಮತ್ತು ಅವರ ಮಗ ಅಮಿತ್ (5 ವರ್ಷ) ಸಾವನ್ನಪ್ಪಿದರು. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿಯ ಆರೋಗ್ಯ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫಾಸ್ಟ್ ಫುಡ್ ಸೆಂಟರ್ ನಲ್ಲಿ ಪಾಸ್ತಾ ತಿಂದ ಬಳಿಕ ಈ ಘಟನೆ ನಡೆದಿದೆ. ಇಬ್ಬರು ಸಾವಿಗೀಡಾಗಿದ್ದಾರೆ. ಐವರು ಆರೋಗ್ಯ ಗಂಭೀರವಾಗಿದೆ. ಆಹಾರವು ಹೇಗೆ ವಿಷಕಾರಿಯಾಯಿತು ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ. ಶೀಘ್ರವೇ ಮಾಹಿತಿ ಸಿಗಲಿದೆ ಎಂದು ಕೈಗಾರಿಕಾ ಪೊಲೀಸ್ ಠಾಣೆ ಪ್ರದೇಶ ಪೊಲೀಸ್ ಠಾಣೆ ಉಸ್ತುವಾರಿ ಸಂಜಯ್ ಕುಮಾರ್ ಅವರು ತಿಳಿಸಿದ್ದಾರೆ.