ನವದೆಹಲಿ: ಬಿಹಾರದಲ್ಲಿ ಮತದಾರರ ಅಧಿಕಾರ ಯಾತ್ರೆಯ ವೇಳೆ ತಮ್ಮನ್ನು ಮತ್ತು ತಮ್ಮ ಮೃತ ತಾಯಿಯ ವಿರುದ್ಧ ಮಾಡಲಾದ ಅವಹೇಳನಕಾರಿ ಹೇಳಿಕೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರೀಯ ಜನತಾ ದಳ (ರ‍್ಜೆಡಿ) ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ನಿಂದನಾತ್ಮಕ ಹೇಳಿಕೆಗಳು ಕೇವಲ ತಮ್ಮ ತಾಯಿಗೆ ಮಾತ್ರವಲ್ಲ, ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಹೇಳಿದರು. ಸಂಪ್ರದಾಯ ಮತ್ತು ಸಂಸ್ಕೃತಿಯುಳ್ಳ ಬಿಹಾರದ ಭೂಮಿಯಲ್ಲಿ ಇಂತಹ ನೀಚ ಹೇಳಿಕೆಗಳನ್ನು ನಾನು ಎಂದಿಗೂ ಊಹಿಸಿರಲಿಲ್ಲ. ತಾಯಿ ಎಲ್ಲರ ಸ್ವಾಭಿಮಾನ ಮತ್ತು ಜಗತ್ತು ಆಗಿರುತ್ತಾರೆ ಎಂದರು.
“ತಾಯಿಯೇ ನಮ್ಮ ಜಗತ್ತು. ತಾಯಿಯೇ ನಮ್ಮ ಸ್ವಾಭಿಮಾನ. ಕೆಲವು ದಿನಗಳ ಹಿಂದೆ ರ‍್ಜೆಡಿ- ಕಾಂಗ್ರೆಸ್ ನಾಯಕರು ನನ್ನ ತಾಯಿಯನ್ನು ನಿಂದಿಸಿದರು. ಈ ನಿಂದನೆಗಳು ನನ್ನ ತಾಯಿಗೆ ಮಾಡಿದ ಅವಮಾನ ಮಾತ್ರವಲ್ಲ. ಇವು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ. ಅವರ ಕೀಳು ಹೇಳಿಕೆಗಳಿಂದ ನೀವೂ ಕೂಡ ನನ್ನಷ್ಟೇ ನೊಂದಿದ್ದೀರಿ ಎಂಬುದು ನನಗೆ ಗೊತ್ತು ಎಂದು ಹೇಳಿದರು.
ಮೃತರನ್ನೂ ಬಿಡದ ರಾಜಕೀಯ ಪಕ್ಷಗಳು: ದೇಶದ ಇತರ ತಾಯಿಂದಿರ ಸೇವೆ ಮಾಡಲು ನಾನು ನನ್ನ ತಾಯಿಯಿಂದ ದೂರವಾದೆ. ಶತಾಯುಷಿಯಾದ ನನ್ನ ತಾಯಿ ಈಗ ನನ್ನ ಜೊತೆ ಇಲ್ಲ. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಆಕೆಯನ್ನು ರ‍್ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ನಿಂದಿಸಿವೆ. ಸಹೋದರಿಯರೇ ಮತ್ತು ತಾಯಂದಿರೇ, ನಾನು ನಿಮ್ಮ ಮುಖಗಳಲ್ಲಿ ನಿಮಗಾದ ನೋವನ್ನು ಗುರುತಿಸಿದೆ. ಅದನ್ನು ನಾನು ಊಹಿಸಬಲ್ಲೆ. ಕೆಲವು ತಾಯಂದಿರು ಕಣ್ಣೀರು ಸುರಿಸಿದರು. ಇದು ತುಂಬಾ ದುಃಖಕರ, ನೋವಿನ ಸಂಗತಿ” ಎಂದರು.