ಭರತನಾಟ್ಯ ಕ್ಷೇತ್ರದಲ್ಲಿ ವಿದುಷಿ. ಅಕ್ಷರಾ ಭಾರಧ್ವಾಜ್ ಬಹುಮುಖ ಪ್ರತಿಭೆಯಾಗಿ ಅನೇಕ ಸಾಧನೆಗಳನ್ನು ಮಾಡಿದ್ದು, ಉತ್ತಮ- ಬದ್ಧತೆಯ ನೃತ್ಯಗುರುವಾಗಿ ಖ್ಯಾತರು. ಭರತನಾಟ್ಯ ನೃತ್ಯಕಲಾವಿದೆ, ನಾಟ್ಯಗುರು, ನೃತ್ಯಸಂಯೋಜಕಿ-ಸಂಶೋಧಕಿ, ಸಂಗೀತಗಾರ್ತಿ ಹಾಗೂ ರಂಗಭೂಮಿ-ಚಲನಚಿತ್ರ ರಂಗದ ಚಟುವಟಿಕೆಗಳಲ್ಲಿ ನಿರತರಾದ ಅದ್ಭುತ ಪ್ರತಿಭೆ ಅಕ್ಷರಾ ಅವರ, ‘ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್’ ನೃತ್ಯಶಾಲೆಯ ವಿದ್ಯಾರ್ಥಿನಿ ಈ ಬಹುಮುಖ ಪ್ರತಿಭೆಯ ಶ್ರೀಮತಿ. ಸೌಮ್ಯಶ್ರೀ ಮುರಳಿ ಕಳೆದ ಹದಿನೈದು ವರ್ಷಗಳಿಂದ ನಿಷ್ಠೆಯಿಂದ ಭರತನಾಟ್ಯ ನೃತ್ಯ ತರಬೇತಿ ಪಡೆಯುತ್ತಿರುವ ಇವರು, ಬಿಎಸ್ಸಿ- ಎಲ್ ಎಲ್ ಬಿ ಪದವೀಧರೆ, ಭರತನಾಟ್ಯದಲ್ಲಿ ಎಂ.ಎ. (ಎಂ.ಪಿ.ಎ) ಸ್ನಾತಕೋತ್ತರ ಪದವಿಯನ್ನು ಜೈನ್ ವಿಶ್ವವಿದ್ಯಾಲಯದಿಂದ ಪಡೆದ ಪ್ರತಿಭಾವಂತೆ. ಕರ್ನಾಟಕ ಸರ್ಕಾರದ ‘ವಿದ್ವತ್’ ನೃತ್ಯಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಅಖಿಲ ಭಾರತಿಯ ಗಂಧರ್ವ ಮಹಾವಿದ್ಯಾಲಯದ ಎಲ್ಲ ಅಲಂಕಾರ ಪ್ರಮಾಣಪತ್ರಗಳನ್ನು ಪಡೆದಿರುವ ಸೌಮ್ಯಶ್ರೀ ಶ್ರೀಮತಿ ಸುಧಾ ಮತ್ತು ವೆಂಕಟೇಶ್ ಅವರ ಸುಪುತ್ರಿ ಮತ್ತು ಶ್ರೀ ಮುರಳೀ ಅವರ ಪತ್ನಿ.ಕರ್ನಾಟಕ ಶಾಸ್ತ್ರೀಯ ಸಂಗೀತ- ನೃತ್ಯ, ಈಜುವಿಕೆ, ಬ್ಯಾಡ್ಮಿಂಟನ್ ಕ್ರೀಡೆಯ ಹವ್ಯಾಸವುಳ್ಳ ಇವಳು, ಅಡ್ವೋಕೇಟ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು, ನಾಡಿನಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಯೋಗ ಶಿಕ್ಷಣವನ್ನು ಪಡೆದಿರುವ ಸೌಮ್ಯಶ್ರೀ, ಇದೇ ತಿಂಗಳ 7 ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಜೆ.ಸಿ ರಸ್ತೆಯ ಎ.ಡಿ .ಎ. ರಂಗಮಂದಿರದಲ್ಲಿ ಭರತನಾಟ್ಯದ ಕಲಾಪ್ರಾವೀಣ್ಯದ ನೃತ್ಯ ಪ್ರದರ್ಶನಕ್ಕಾಗಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾರೆ. ಈ ಮೋಹಕ ಕಲಾವಿದೆಯ ಕಲಾತ್ಮಕ ನರ್ತನವನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.
ಬೆಂಗಳೂರಿನಲ್ಲಿ ಅಡ್ವೋಕೇಟ್ ಆಗಿದ್ದ ಶ್ರೀ ವೆಂಕಟೇಶ್ ಮತ್ತು ಸುಧಾ ದಂಪತಿಗಳ ಪುತ್ರಿ ಸೌಮ್ಯಶ್ರೀ ತನ್ನ 4 ರ ಎಳವಯಸಲ್ಲೇ ನೃತ್ಯದ ಆಸಕ್ತಿ ತೋರಿ ಕಲಿಯಲಾರಂಭಿಸಿದರು. ಇವರ ಮೊದಲ ಗುರು ವಿ. ಪದ್ಮಿನಿ ಅಚ್ಚಿ. ಅವರ ಬಳಿ ಪ್ರಾರಂಭಿಕ ಹಂತದ ಶಿಕ್ಷಣ ಮುಗಿಸಿಕೊಂಡು ನಂತರ ಉನ್ನತ ಕಲಿಕೆಗೆ ಗುರು ಅಕ್ಷರಾ ಭಾರಧ್ವಾಜ್ ಬಳಿ ಕಲಿತು ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ, ಉತ್ತಮಾಂಕಗಳನ್ನು ಪಡೆದು ನಂತರ ‘ವಿದ್ವತ್’ ನೃತ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಹೆಗ್ಗಳಿಕೆ ಇವರದು. ವಿದ್ಯಾಭ್ಯಾಸದಲ್ಲೂ ಜಾಣೆಯಾಗಿರುವ ಸೌಮ್ಯಶ್ರೀ, ಎಂ.ಇ.ಎಸ್. ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ವಿಶ್ವೇಶ್ವರಪುರಂ ಕಾಲೇಜ್ ಆಫ್ ಲಾ ನಿಂದ ಎಲ್ಎಲ್.ಬಿ. ಪದವಿ ಪಡೆದಿದ್ದಾರೆ.
ಗುರುವಿನ ಮಾರ್ಗದರ್ಶನದಲ್ಲಿ ಅವರ ಸಂಸ್ಥೆಯ ಜೊತೆಗೆ ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು- ಹೊಸೂರು ನಾಟ್ಯಾಂಜಲಿ, ತಂಜಾವೂರಿನಲ್ಲಿ ವಂದೇ ಭಾರತಂ ನಿತ್ಯ ಉತ್ಸವ, ಮೈಸೂರು ದಸರಾ ಉತ್ಸವ, ಇಸ್ಕಾನ್, ತರಂಗರಂಗ, ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ಮುಂತಾದ ಅನೇಕ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡ ಹೆಮ್ಮೆ ಅವರದು. ಆಶಾ ಯೋಗ ಸೆಂಟರ್ ನಲ್ಲಿ ಯೋಗ ಶಿಕ್ಷಕರ ಕೋರ್ಸ್ ಮಾಡಿಕೊಂಡಿದ್ದಾರೆ. ತನ್ನ ಲಾಯರ್ ವೃತ್ತಿಯ ಜೊತೆಗೆ ಉತ್ತಮ ನೃತ್ಯ ಕಲಾವಿದೆಯಾಗಿ ಸಾಧನೆ ಮಾಡುವ ಕನಸು ಸೌಮ್ಯಶ್ರೀಯದು.
ವೈ.ಕೆ.ಸಂಧ್ಯಾ ಶರ್ಮ