ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರೋ ಉಪನ್ಯಾಸಕರ ಹುದ್ದೆ ಶೀಘ್ರ ನೇಮಕಾತಿ ಮಾಡಬೇಕು ಅಂತ ಎಬಿವಿಪಿ ಸಂಘಟನೆ ಸರ್ಕಾರವನ್ನ ಆಗ್ರಹಿಸಿದೆ. ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರೋ ಎಬಿವಿಪಿ ಶೀಘ್ರವೇ ನೇಮಕಾತಿ ಆಗಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟಿದೆ.
ರಾಜ್ಯದ 430ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ ಕಳೆದ ಒಂದೂವರೆ ತಿಂಗಳಿನಿಂದ ಪಾಠ ಪ್ರವಚನಗಳು ನಡೆದಿಲ್ಲದಿರುವುದು ಘನ ಸರ್ಕಾರಕ್ಕೆ ತಿಳಿಯದಿರುವ ವಿಚಾರವೇನಲ್ಲ,ಪದವಿ ವಿದ್ಯಾರ್ಥಿಗಳಿಗೆ ಸರಿಯಾದ ಪ್ರಮಾಣದಲ್ಲಿ ತರಗತಿಗಳು ನಡೆಯದೇ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವುದು ಎಂಬ ಅರಿವಿದ್ದರೂ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳದಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಅತೀವ ಬೇಸರ ತರಿಸಿದೆ.
ಈಗಾಗಲೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ತನ್ನ ಮಧ್ಯಂತರ ಆದೇಶವನ್ನು ನೀಡಿ, ತತಕ್ಷಣ ಉಪನ್ಯಾಸಕರನ್ನು ನೇಮಕಾತಿ ಮಾಡಲು ಸೂಚಿಸಿದರೂ ಕೂಡ ಇದುವರೆಗೂ ಉಪನ್ಯಾಸಕರ ನೇಮಕಾತಿ ಸಂಬಂಧಿಸಿದಂತೆ ಯಾವುದೇ ರೀತಿಯ ಬೆಳವಣಿಗೆಗಳು ಕಂಡುಬಂದಿರುವುದಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಈ ಕೂಡಲೇ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸುವ ಪರಿಹಾರದ ಸೂತ್ರ ಒಂದನ್ನು ರೂಪಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರನ್ನು ಒದಗಿಸಲು ಆಗ್ರಹಿಸಿ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ತೀವ್ರ ಸ್ವರೂಪದ ಶಾಂತಿಯುತ ಹೋರಾಟ ಹಾಗೂ ಪ್ರತಿಭಟನಾ ಜಾಥಾಗಳು ನಡೆದಿವೆ. ಆದರೆ ವಿಧಾನಸೌಧದ ಗದ್ದುಗೆದಾರರು ತುಷ್ಟಿಕರಣ,ಸಾಮಾಜಿಕ ವಿಭಜನೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಗ್ನರಗಿರುವ ಕಾರಣ ನ್ಯಾಯಯುತವಾದ ವಿದ್ಯಾರ್ಥಿಗಳ ಕೂಗು ಕೇಳಿದಂತಿಲ್ಲ.ಆದ್ದರಿಂದ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ತ್ವರಿತವಾಗಿ ನೇಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
ಒಂದು ವೇಳೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಎಬಿವಿಪಿ ನೀಡಿದೆ.