ಬೆಂಗಳೂರು: ಪರಿಸರಕ್ಕೆ ಒಳ್ಳೆಯದಾಗಬೇಕು. ಬೆಂಗಳೂರು ನಗರ ಹಸಿರಿನಿಂದ ಕಂಗೊಳಿಸಬೇಕು ಎಂದು ಈ ಹಿಂದಿನ ಬೆಂಗಳೂರು ಮಹಾನಗರ ಪಾಲಿಕೆ ನಗರದಾದ್ಯಂತ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನೆಟ್ಟು ಬೆಳೆಸಿದ್ದ 25000ಕ್ಕೂ ಹೆಚ್ಚು ಗಿಡಗಳನ್ನು ಕಡಿಯಬೇಕಾದ ಅನಿವಾರ್ಯತೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಎದುರಾಗಲಿದೆ. ಇದಕ್ಕೆ ಕಾರಣ, ಕೊನೊಕಾರ್ಪಸ್ ಟ್ರೀ ಪ್ರಭೇದ ಮಾನವನ ಆರೋಗ್ಯಕ್ಕೆ ಮತ್ತು ಪರಿಸರ ವ್ಯವಸ್ಥೆಗೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿರುವುದು. ಕೊನೊಕಾರ್ಪಸ್ ಟ್ರೀ ಪ್ರಭೇದ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ನ ಸೆಂಟ್ರಲ್ ಎಂಪವರ್ಡ್ ಕಮಿಟಿ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಪರಿಣಾಮವಾಗಿ ಇದೀಗ, ಕಾನ್ಕಾರ್ಪಸ್ ಟ್ರೀಗಳ ತೆರವಿಗೆ ಆದೇಶ ಹೊರಡಿಸಲು ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಚಿಂತನೆ ನಡೆಸಿದೆ.
ನಗರವು ಹಸಿರಾಗಿ ಸುಂದರವಾಗಿ ಕಾಣಬೇಕು ಎಂಬ ಉದ್ದೇಶದೊಂದಿಗೆ ರಸ್ತೆಬದಿಗಳು, ಮೈದಾನಗಳ ಬದಿಗಳಲ್ಲಿ ಮತ್ತು ಖಾಲಿ ಜಾಗಗಳಲ್ಲಿ ಬಿಬಿಎಂಪಿ ಸಾವಿರಾರು ಕೊನೊಕಾರ್ಪಸ್ ಸಸಿಗಳನ್ನು ನೆಟ್ಟಿತ್ತು. ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ಹಾಗೂ ಇತರ ಸಂಘ-ಸಂಸ್ಥೆಗಳ ಜತೆಗೂಡಿ ಬಿಬಿಎಂಪಿ ಈ ಕೆಲಸ ಮಾಡಿತ್ತು. ಗಿಡಗಳು ವೇಗವಾಗಿ, ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆದು ದೊಡ್ಡದಾಗುತ್ತಿವೆ. ಇದೇ ಸಂದರ್ಭದಲ್ಲಿ ಇದೀಗ ಸಾವಿರಾರು ಗಿಡಗಳ ಮಾರಣಹೋಮ ಮಾಡಬೇಕಾದ ಅನಿವಾರ್ಯತೆಗೆ ಜಿಬಿಎ ಸಿಲುಕುವ ಎಲ್ಲ ಸಾಧ್ಯತೆಗಳಿವೆ.
ಹಲವಾರು ರಾಜ್ಯಗಳಿಂದ ಬಂದ ದೂರುಗಳನ್ನು ಪರಿಶೀಲಿಸಿದ ಸಿಇಸಿ, ಪರಿಸರ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಿತ್ತು. ಅಲ್ಲದೆ, ಕೊನೊಕಾರ್ಪಸ್ ಸಸಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಕಲೆಹಾಕಿತ್ತು. ನಂತರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು.
ಉಸಿರಾಟಕ್ಕೂ ಮಾರಕ ಕೊನೊಕಾರ್ಪಸ್ ಸಸಿಗಳು!
ವಿಜ್ಞಾನಿಗಳು ಸಿಇಸಿಗೆ ನೀಡಿದ ಮಾಹಿತಿ ಪ್ರಕಾರ, ಕೊನೊಕಾರ್ಪಸ್ ಸಸಿಗಳು ಪರಾಗ ಬಿಡುಗಡೆಯ ಮೂಲಕ ಉಸಿರಾಟಕ್ಕೂ ಮಾರಕವಾಗಿ ಪರಿಣಮಿಸುತ್ತವೆ. ಉಸಿರಾಟದ ಅಸಹಜತೆಗೆ ಕಾರಣವಾಗುತ್ತವೆ. ಹೀಗಾಗಿ, ಈ ಗಿಡಗಳನ್ನು ನೆಡುವುದನ್ನು ತಕ್ಷಣವೇ ನಿಲ್ಲಿಸಲು ಮತ್ತು ಈಗಾಗಲೇ ನೆಟ್ಟಿರುವ ಸಸಿಗಳನ್ನು ಕಡಿದು ಬೇರೆ ಸ್ಥಳೀಯ ಸಸ್ಯಗಳನ್ನು ನೆಡುವಂತೆ ಕೇಂದ್ರ ಅರಣ್ಯ ಇಲಾಖೆಯು ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಸಿಇಸಿ ಉಲ್ಲೇಖಿಸಿತ್ತು.
ಬೆಂಗಳೂರಿನಲ್ಲಿ ಎಷ್ಟಿವೆ ಕೊನೊಕಾರ್ಪಸ್ ಸಸಿಗಳು?
ಬಿಬಿಎಂಪಿ ಎಂಟು ನಗರ ವಲಯಗಳಲ್ಲಿ 5,000 ಕ್ಕೂ ಹೆಚ್ಚು ಕೊನೊಕಾರ್ಪಸ್ ಸಸಿಗಳನ್ನು ನೆಟ್ಟಿರುವುದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. ಸರ್ಕಾರೇತರ ಸಂಸ್ಥೆಗಳು, ನಿವಾಸಿ ಕಲ್ಯಾಣ ಸಂಘಗಳು ಮತ್ತು ನಾಗರಿಕ ಗುಂಪುಗಳು ಸುಮಾರು 20,000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ ಬಗ್ಗೆ ಅಂದಾಜಿಸಲಾಗಿದೆ.