ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ; ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇನ್ನೂ 15 ಜಾತಿಗಳಿಗೆ ಕ್ರೈಸ್ತ ಟ್ಯಾಗ್ ನೀಡಿರುವುದನ್ನು ರದ್ದು ಮಾಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಿನ್ನೆ ಪ್ರಾರಂಭವಾಗಿದೆ. ಈ ಸಮೀಕ್ಷೆ ಒಂದು ಗೊಂದಲದ ಗೂಡು ಎಂದು ಟೀಕಿಸಿದರು. ಇದು ಹಿಂದುತ್ವ ವಿರೋಧ ನೀತಿ ಎಂದು ಆರೋಪಿಸಿದರು.
ಗೊಂದಲ ಪರಿಹರಿಸಲು ಕೋರಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಬ್ರಾಹ್ಮಣ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಒಕ್ಕಲಿಗ, ವೀರಶೈವ ಮೊದಲಾದ ಎಲ್ಲರನ್ನೂ ಕ್ರೈಸ್ತ ಎಂದು ಹೆಸರಿಸಿದ್ದಾರೆ. ಹೊಲೆಯ, ಮಾದಿಗ, ಬಂಜಾರ ಕ್ರೈಸ್ತ, ಬೋವಿ ಕ್ರೈಸ್ತ ಎಲ್ಲವನ್ನೂ ಸೇರಿಸಿದ್ದರು ಎಂದು ಆಕ್ಷೇಪಿಸಿದರು.
ಹೋರಾಟಗಳು ನಡೆದು ಪ್ರಭಾವಿ ಸಮುದಾಯಗಳು ಹೋರಾಟಕ್ಕೆ ಇಳಿದಾಗ ಅವುಗಳನ್ನು ಕಾಣದಂತೆ (ಹೈಡ್) ಮಾಡಿದ್ದಾಗಿ ಹೇಳಿದ್ದರು. ಆದರೆ, ಪರಿಶಿಷ್ಟ ಜಾತಿ, ವರ್ಗಗಳದು ಹೈಡ್ ಮಾಡಿಲ್ಲ. ಇದರಿಂದ ಗೊಂದಲವಾಗಿದೆ ಎಂದರು. ಎಲ್ಲ ಜಾತಿಗಳನ್ನು ಸಂಪೂರ್ಣ ಕೈಬಿಟ್ಟಿಲ್ಲ ಎಂದು ದೂರಿದರು.
ಸುತ್ತಿ ಬಳಸಿ ಮಾತನಾಡುತ್ತಿದ್ದಾರೆ. ಕ್ರೈಸ್ತರಾಗಿ ಮತಾಂತರ ಹೊಂದಿದವರ ಮೂಲಜಾತಿ ಹಾಗೇ ಉಳಿಯುತ್ತದೆ ಎಂದು ಹೇಳಿದ್ದಾರೆ. ಅದ್ಹೇಗೆ ಉಳಿಯಲು ಸಾಧ್ಯ ಎಂದು ಕೇಳಿದರು. ಮೂಲಜಾತಿಯಲ್ಲೇ ಮೀಸಲಾತಿ ಕೊಡಬೇಕೇ ಎಂದು ತೀರ್ಮಾನ ಮಾಡುತ್ತಾರಂತೆ. ಕೋರ್ಟ್ ತೀರ್ಮಾನ ಮಾಡಿದೆ, ತೀರ್ಮಾನ ಮಾಡಲು ಇವರ್ಯಾರು ಎಂದು ಕೇಳಿದರು. ದಲಿತರು ಕ್ರೈಸ್ತರಾಗಿ ಸೇರಿದರೆ ಅವರನ್ನು ದಲಿತರೆಂದು ಪರಿಗಣಿಸಲಾಗುವುದಿಲ್ಲ; ಇಲ್ಲಿ ಗೊಂದಲವಿದೆ ಎಂದು ಟೀಕಿಸಿದರು.
ಮತಾಂತರ ಆದವರ ಜಾತಿ ನೋಡದಿರಿ. ಇದೇರೀತಿ ಮುಂದುವರೆಸಿ ಕೇರಿಗಳಲ್ಲಿ ಬರುವುದಾದರೆ, ನೀವು ಒಂದೇ ಒಂದು ಬರಹ ಬರೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲ ನಮ್ಮ ಜನ ಬಿಡುವುದಿಲ್ಲ ಎಂದು ತಿಳಿಸಿದರು. ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ, ಕಾಂತರಾಜು ಆಯೋಗ, ಜಯಪ್ರಕಾಶ್ ಹೆಗ್ಡೆ ಆಯೋಗದಲ್ಲಿ ಪರಿಶಿಷ್ಟ ಜಾತಿಗೆ ಕ್ರಿಶ್ಚಿಯನ್ ಪದ ಇರಲಿಲ್ಲ ಎಂದು ವಿವರಿಸಿದರು. ಈಗ ಎಲ್ಲಿಂದ ಯಾಕೆ ಹುಟ್ಟಿದೆ? ಇವತ್ತು ಸಂಜೆಯೇ ಸಭೆ ಕರೆದು ತೀರ್ಮಾನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದ್ದಾಗಿ ವಿವರಿಸಿದರು. ಇವತ್ತೇ ತೀರ್ಮಾನ ಆಗದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಆಯೋಗವೇ ಹೊಣೆ ಎಂದು ಹೇಳಿದರು.
ಮಾತನಾಡುವಾಗ ವಾದವಿವಾದವೂ ಆಗಿದೆ. ಜನರಲ್ಲಿ ನೋವಿದೆ. ಕ್ರಿಶ್ಚಿಯನ್ ಧರ್ಮ ಸೇರ್ಪಡೆಗೆ ವಿರೋಧ ಇಲ್ಲ; ಆಯೋಗವು ದಲ್ಲಾಳಿ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ
