ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರೋದು ಗುಂಡಿಗಳನ್ನ ನಡೆಸೋ ಸರ್ಕಾರ. ಇಂತಹ ಸರ್ಕಾರ ನಾನು ನೋಡೇ ಇಲ್ಲ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಗುಂಡಿಗಳ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಗುಂಡಿಗಳನ್ನ ನಡೆಸೋ ಸರ್ಕಾರ ನಾನು ನೋಡೇ ಇರಲಿಲ್ಲ. 6 ಸಾವಿರ, 3 ಸಾವಿರ ಗುಂಡಿಗಳು ಎನ್ನುತ್ತಿದ್ದಾರೆ. ಅಧಿಕಾರಿಗಳನ್ನ ಗುಂಡಿ ಮುಚ್ಚೋಕೆ ನೇಮಿಸಿರುವ ಏಕೈಕ ಸರ್ಕಾರ ಅಂದರೆ ಸ್ವಾತಂತ್ರ‍್ಯ ಭಾರತದ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಸರ್ಕಾರ ಎಂದು ಕಿಡಿಕಾರಿದರು.
ಸೋಮವಾರ ರಾತ್ರಿ ನಾನು ವಿಮಾನದಲ್ಲಿ ಬೆಂಗಳೂರಿಗೆ ಬಂದೆ. ಬಿಡಿಎ ಮುಂದೆ ಫ್ಲೈಓವರ್ ಮೇಲೆ ಮಳೆ ಬರುತ್ತಿದ್ದರೂ ಗುಂಡಿ ಮುಚ್ಚುತ್ತಿದ್ದಾರೆ. ಮಳೆ ಬರೋವಾಗ ಗುಂಡಿ ಮುಚ್ಚಿದ್ರೆ ಇರುತ್ತದೆಯಾ? ಜಿಬಿಎ ಅಧಿಕಾರಿಗಳಿಗೆ ಅಷ್ಟು ಪರಿಜ್ಞಾನ ಇಲ್ಲವಾ? ಮಳೆ ಬರೋವಾಗ ಗುಂಡಿ ಮುಚ್ಚಿದ್ರೆ ಆಗುತ್ತಾ? ಏನು ಮಾಡ್ತಿದೆ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮನೆ ಮುಂದೆ ಗುಂಡಿ ಇದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ಮನೆ ಮುಂದೆ ಗುಂಡಿ ಇದ್ದರೆ ಡಿಕೆಶಿ ಮನೆ ಮುಂದೆ ಹೊಂಡಾ ಮಾಡಿಕೊಳ್ಳೋಕೆ ಹೇಳಿ. ಇವರ ಮನೆ ಮುಂದೆ ಒಂದು ಲೇಕ್ ಮಾಡಿಕೊಳ್ಳಲಿ. ಏನು ಕೇಳಿದ್ರು ಮೋದಿ ಮಾಡಿಲ್ಲ, ನೀವು ಇದ್ದಾಗ ಮಾಡಿಲ್ಲ ಎನ್ನುತ್ತಾರೆ. ನಾವು ಇದ್ದಾಗ ಮಾಡಿಲ್ಲ ಅನ್ನೋದಕ್ಕೆ ನೀವು ಅಧಿಕಾರಕ್ಕೆ ಬಂದಿದ್ದೀರಾ. ಮತ್ತೆ ನೀವು ಹೋಗೋಕೆ ತಯಾರಾಗಿ, ನಾವು ಬರುತ್ತೇವೆ ಎಂದು ಹರಿಹಾಯ್ದರು.