Ad image

ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ ಸಮನ್ವಯ ಕೊರತೆಯಿಂದ ಸಮಸ್ಯೆ

Team SanjeMugilu
2 Min Read

ಬೆಂಗಳೂರು: ಬೆಂಗಳೂರಿನಲ್ಲಿ ಜನರಿಗಾಗಿ ನಿರ್ಮಿಸಿರುವ  ಪಿಹೆಚ್‌ಸಿ ಸೆಂಟರ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಅಭಿವೃದ್ಧಿ ಕಾಣದೆ ನಿಂತಿವೆ. ಇನ್ನಾದರೂ ಇವುಗಳನ್ನು ಸರಿಪಡಿಸಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತದೆಯೇ ಎಂದು ಕಾಯುತ್ತಿದ್ದ ಜನರಿಗೀಗ ಬ್ಯಾಡ್ ನ್ಯೂಸ್ ಸಿಕ್ಕಿದೆ. ಗಂಡ, ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ರೀತಿ ಆರೋಗ್ಯ ಇಲಾಖೆ ಹಾಗೂ ಜಿಬಿಎ ನಡುವಿನ ಕಿತ್ತಾಟದಲ್ಲಿ ರೋಗಿಗಳು ಬಡವಾದಂತಾಗಿದೆ.

ಜಿಬಿಎ ಆಸ್ಪತ್ರೆಗಳಲ್ಲಿರುವ ಕೊರತೆಗಳೇನು?

ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿರುವ ಪಿಹೆಚ್‌ಸಿ ಸೆಂಟರ್‌ಗಳು, ರೆಫೆರಲ್ ಆಸ್ಪತ್ರೆಗಳು, ಮಲ್ಟಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆ ಹಾಗೂ ಜಿಬಿಎ,ಈ ಎರಡು ಇಲಾಖೆಗಳು ನಿರ್ವಹಣೆ ಮಾಡುತ್ತಿದೆ. ಆದರೆ ಎರಡು ಇಲಾಖೆಗಳಿಗೂ ಸಂಪೂರ್ಣವಾಗಿ ಆಸ್ಪತ್ರೆಗಳ ಮೇಲೆ ಹಿಡಿತ ಇಲ್ಲದಂತಾಗಿದೆ. ಅನುದಾನ, ಮೆಡಿಸನ್, ನಿರ್ವಹಣೆ, ಸಿಬ್ಬಂದಿ ಹಾಗೂ ವೈದ್ಯರ ನೇಮಕಾತಿ ಹೀಗೆ ಅನೇಕ ವಿಚಾರಗಳಲ್ಲಿ ಸಮನ್ವಯತೆಯ ಕೊರತೆ ಇರುವುದು ಎದ್ದು ಕಾಣುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ಸರಿಯಾದ ರೀತಿಯ ಅಭಿವೃದ್ಧಿ ಕಾಣುತ್ತಿಲ್ಲ.

ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯೂ ಸಿಗುತ್ತಿಲ್ಲ. ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ ಜಿಬಿಎ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಪಡೆಯಲು ಮುಂದಾಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಹರ್ಷಗುಪ್ತಗೆ ವರದಿ ಸಲ್ಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೀಗ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯ ಸುಪರ್ದಿಗೆ ಪಡೆಯುವುದಕ್ಕೆ ಅನೇಕ ಸಮಸ್ಯೆಗಳು ಎದುರಾಗಿವೆ.

ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ನೀಡಲು ಜಿಬಿಎ ಹಿಂದೇಟು

ಆಸ್ಪತ್ರೆಗಳನ್ನು ಪ್ರತ್ಯೇಕವಾಗಿ ಆರೋಗ್ಯ ಇಲಾಖೆ ವ್ಯಾಪ್ತಿಗೆ ನೀಡಲು ಜಿಬಿಎ ಹಿಂದೇಟು ಹಾಕುತ್ತಿದೆ. ಈ ಹಿನ್ನೆಲೆ ಅಭಿವೃದ್ಧಿಯ ಕಾರ್ಯ ಅರ್ಧಕ್ಕೆ ನಿಲ್ಲುವಂತಾಗಿದೆ. ಆಸ್ಪತ್ರೆಗಳನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಸದ್ಯದ ಮಟ್ಟಿಗೆ ಆರೋಗ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಇದೀಗ ನಗರದ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ ಇರುವುದರಿಂದ ರೋಗಿಗಳು ಜನರಲ್ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ರೆಫೆರಲ್ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆಯಿಂದಲೂ ಮತ್ತು ಜಿಬಿಎಯಿಂದಲೂ ಸಂಪೂರ್ಣ ಸೇವೆ ಸಿಗದೇ ಇರುವುದು ನಗರದ ರೋಗಿಗಳಿಗೆ ಮತಷ್ಟು ಸಮಸ್ಯೆ ಉಂಟುಮಾಡಿದೆ. ಎರಡು ಇಲಾಖೆಗಳಲ್ಲಿ ಸಮನ್ವಯತೆಯ ಕೊರತೆ ಇರುವುದು ಸಾಬೀತಾಗಿದ್ದು, ಈ ಆಸ್ಪತ್ರೆಗಳ ನಿರ್ವಹಣೆ ಹಾಗೂ ಸೇವೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತಾಗಿದೆ.

Share This Article