ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಹಲವು ಹಗರಣಗಳ ತನಿಖೆಗೆಂದು ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವನ್ನು ಸರ್ಕಾರ ದಿಢೀರನೆ ರದ್ದುಗೊಳಿಸಿದೆ.
ಸೆ.30 ರ ವರೆಗೆ ತಮ್ಮ ಅಧಿಕಾರ ಅವಧಿ ವಿಸ್ತರಿಸುವಂತೆ ಆಯೋಗ ಮನವಿ ಮಾಡಿತ್ತು. ಅದನ್ನು ಸರ್ಕಾರ ಪರಿಗಣಿಸಿಲ್ಲ ಎನ್ನಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಆರೋಪ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ತನಿಖೆ ಜವಾಬ್ದಾರಿಯನ್ನು ಈ ಆಯೋಗಕ್ಕೆ ವಹಿಸಲಾಗಿತ್ತು.
ಆಯೋಗಕ್ಕೆ ನೀಡಲಾಗಿದ್ದ ವಾಹನ ಹಾಗೂ ಸಿಬ್ಬಂದಿಯನ್ನು ಸರ್ಕಾರ ನಿನ್ನೆ ಸಂಜೆಯಿಂದ ವಾಪಸ್ ಪಡೆದಿದೆ. ಅಧ್ಯಕ್ಷರ ಸೂಚನೆ ಮೇರೆಗೆ ಆಯೋಗದ ಕಾರ್ಯಚಟುವಟಿಕೆ ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ ಎಂದು ಕೇಳಿಬಂದಿದೆ.
ಬೆಂಗಳೂರು ಅಕ್ರಮ ಕಾಮಗಾರಿ ತನಿಖೆ ನಡೆಸಿದ ಆಯೋಗ ಆ.30 ರಂದು ಸರ್ಕಾರಕ್ಕೆ 8,900 ಪುಟಗಳ ಬೃಹತ್ ತನಿಖಾ ವರದಿಯನ್ನು ಸಲ್ಲಿಸಿತ್ತು. 761 ಕಾಮಗಾರಿಗಳನ್ನ ಪರಿಶೀಲಿಸಿ ಹಲವು ನ್ಯೂನತೆಗಳನ್ನು ಪತ್ತೆಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು.
ಏಕ ಸದಸ್ಯ ಆಯೋಗದ ಕೆಲಸ ಮುಗಿದಿದ್ದರೂ ಕೆಲವು ಆಡಳಿತಾತ್ಮಕ ಕಾರ್ಯ ಹಾಗೂ ದಾಖಲೆ ನಿರ್ವಾಹಣೆಗಾಗಿ ಸೆ.30 ರ ವರೆಗೆ ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು ಎನ್ನಲಾಗಿದೆ. ಆದರೆ, ಸರ್ಕಾರ ನಿನ್ನೆ ಏಕಾಏಕಿ ಆಯೋಗಕ್ಕೆ ನೀಡಿದ್ದ ಎಲ್ಲಾ ಸವಲತ್ತು ವಾಪಸ್ ಪಡೆದಿದೆ ಎನ್ನಲಾಗುತ್ತಿದೆ.