ನೋಯ್ಡಾ: ಜಾಗತಿಕವಾಗಿ ಅನಿಶ್ಚಿತತೆಯ ಪರಿಸ್ಥಿತಿ ಇದ್ದರೂ ಭಾರತದ ಪ್ರಗತಿಯ ಹಾದಿ ಉತ್ತಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು. ಇಲ್ಲಿ ಇಂದು ಉತ್ತರಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ (ಯುಪಿಐಟಿಎಸ್) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು ತಮ್ಮ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳನ್ನು ವಿವರಿಸಿದರು.
ಮೇಕ್ ಇನ್ ಇಂಡಿಯಾ ಯೋಜನೆ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಭಾರತದಲ್ಲಿ ಎಲ್ಲವನ್ನೂ ತಯಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿರುವುದನ್ನು ನರೇಂದ್ರ ಮೋದಿ ಈ ಸಂದರ್ಭದಲ್ಲಿ ಹೇಳಿದರು.
‘ಅನಿಶ್ಚಿತತೆಯ ಸಂದರ್ಭಗಳು ನಮಗೆ ಹಿನ್ನಡೆ ತರುವುದಿಲ್ಲ. ಅಂಥ ಪರಿಸ್ಥಿತಿಯಲ್ಲೂ ಹೊಸ ಮಾರ್ಗ ಕಂಡುಕೊಳ್ಳಲು ಯತ್ನಿಸುತ್ತೇವೆ. ಮುಂಬರುವ ದಶಕಗಳ ಬೆಳವಣಿಗೆಗಾಗಿ ಈಗ ತಳಹದಿ ಬಲಪಡಿಸಲಾಗುತ್ತಿದೆ. ಸ್ವಾವಲಂಬಿ ಭಾರತ್ ನಿರ್ಮಾಣವೇ ನಮ್ಮ ಸಂಕಲ್ಪ ಮತ್ತು ಮಂತ್ರ’ ಎಂದು ಪ್ರಧಾನಿ ತಿಳಿಸಿದರು.
‘ಬೇರೆಯವರ ಮೇಲೆ ಅವಲಂಬಿತವಾಗಿರುವುದಕ್ಕಿಂತ ಹೆಚ್ಚಿನ ಅಸಹಾಯಕತೆ ಮತ್ತೊಂದಿಲ್ಲ. ಒಂದು ದೇಶವು ಬೇರೆಯವರ ಮೇಲೆ ಹೆಚ್ಚು ಅವಲಂಬಿತವಾದಷ್ಟೂ ಅದರ ಪ್ರಗತಿ ಕುಂಠಿತಗೊಳ್ಳುತ್ತಾ ಹೋಗುತ್ತದೆ’ ಎಂದು ನರೇಂದ್ರ ಮೋದಿ ವಿಶ್ಲೇಷಿಸಿದರು.
ದೆಹಲಿಗೆ ಸಮೀಪವೇ ಇರುವ ನೋಯ್ಡಾದಲ್ಲಿ ಉದ್ಘಾಟನೆಯಾಗಿರುವ ಇಂಟರ್ನ್ಯಾಷನಲ್ ಟ್ರೇಡ್ ಶೋನಲ್ಲಿ 2,500ಕ್ಕೂ ಅಧಿಕ ಪ್ರದರ್ಶಕರು, 500ಕ್ಕೂ ಅಧಿಕ ವಿದೇಶೀ ಖರೀದಿದಾರರು ಪಾಲ್ಗೊಂಡಿದ್ದಾರೆ. ಐದು ಲಕ್ಷಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಟ್ರೇಡ್ ಶೋನದಲ್ಲಿ ರಷ್ಯಾ ಒಂದು ಪಾರ್ಟ್ನರ್ ದೇಶವಾಗಿದೆ. ಪ್ರಧಾನಿ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಭಾರತ ಹಾಗೂ ರಷ್ಯಾದ ಸಹಭಾಗಿತ್ವವು ಸಾಕಷ್ಟು ವರ್ಷಗಳಿಂದ ಗಟ್ಟಿಯಾಗಿದೆ ಎಂದಿದ್ದಾರೆ.