ಕೆಲ ವಾರಗಳ ಹಿಂದಷ್ಟೆ ಕರ್ನಾಟಕ ರಾಜ್ಯ ಸರ್ಕಾರವು, ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಮಹತ್ವದ, ಜನಪರವಾದ ಆದೇಶವೊಂದನ್ನು ಹೊರಡಿಸಿತ್ತು. ರಾಜ್ಯದಾದ್ಯಂತ ಏಕರೂಪ ಟಿಕೆಟ್ ದರವನ್ನು ಜಾರಿಗೊಳಿಸಿ ಆದೇಶ ಹೊರಡಿಸಿತ್ತು, ಇದರಿಂದ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಕೇವಲ 200 ರೂಪಾಯಿಗೆ ಟಿಕೆಟ್ ಖರೀದಿಸಿ ಸಿನಿಮಾ ನೋಡಬಹುದಾಗಿತ್ತು. ಆದರೆ ಹೊಂಬಾಳೆ ಹಾಗೂ ಇತರೆ ಕೆಲವು ನಿರ್ಮಾಣ ಸಂಸ್ಥೆಗಳು ನ್ಯಾಯಾಲಯಕ್ಕೆ ಹೋಗಿ ಸರ್ಕಾರದ ಆದೇಶದ ವಿರುದ್ಧ ಮಧ್ಯಂತರ ತಡೆ ತಂದಿವೆ. ಆದರೆ ಇದೀಗ ರಾಜ್ಯ ಸರ್ಕಾರವು ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದು, ಈ ಬಾರಿ ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳು ಇಬ್ಬರಿಗೂ ಅನುಕೂಲ ಆಗುವಂತೆ ಯೋಜನೆಯೊಂದನ್ನು ಹಾಕಿಕೊಂಡಿದೆ.
ಕನ್ನಡ ಸಿನಿಮಾಗಳನ್ನು ಒಟಿಟಿಗಳು ನಿರ್ಲಕ್ಷ್ಯ ಮಾಡುತ್ತಿವೆ. ಕನ್ನಡ ಸಿನಿಮಾಗಳನ್ನು ಒಟಿಟಿಗಳು ಖರೀದಿಯೇ ಮಾಡುತ್ತಿಲ್ಲ ಎಂಬ ದೂರುಗಳು ಹಲವು ವರ್ಷಗಳಿಂದಲೂ ಕೇಳುತ್ತಲೇ ಬರುತ್ತಿದೆ. ಸ್ಟಾರ್ ನಟರ ಸಿನಿಮಾಗಳನ್ನು ಸಹ ಒಟಿಟಿಗಳು ಒಳ್ಳೆಯ ಬೆಲೆಗಳಿಗೆ ಖರೀದಿ ಮಾಡುತ್ತಿಲ್ಲ ಎಂಬ ದೂರು ಮೊದಲಿನಿಂದಲೂ ಇದೆ. ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು, ನಿರ್ದೇಶಕರುಗಳು ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಆದರೆ ಇದೀಗ ರಾಜ್ಯ ಸರ್ಕಾರ ಚಿತ್ರರಂಗದ ನೆರವಿಗೆ ಬಂದಿದೆ. ಸ್ವತಃ ರಾಜ್ಯ ಸರ್ಕಾರವೇ ಹೊಸದೊಂದು ಒಟಿಟಿ ಪ್ರಾರಂಭಕ್ಕೆ ಮುಂದಾಗಿದೆ.
ಅಸಲಿಗೆ ಸರ್ಕಾರದ ವತಿಯಿಂದ ಒಟಿಟಿ ಪ್ರಾರಂಭ ಯೋಜನೆ ಹೊಸದೇನಲ್ಲ. ಈ ಹಿಂದಿನ ಬಜೆಟ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಒಟಿಟಿ ಸ್ಥಾಪನೆ ಬಗ್ಗೆ ಉಲ್ಲೇಖಿಸಿದ್ದರು. ಇದೀಗ ಒಟಿಟಿ ಸ್ಥಾಪನೆಗೆ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಒಟಿಟಿ ನಿರ್ಮಾಣ ಅದರ ಕಾರ್ಯವೈಖರಿ ಇನ್ನಿತರೆಗಳ ಬಗ್ಗೆ ವಿವರವಾದ ನೀಲನಕ್ಷೆಯನ್ನು ತಯಾರು ಮಾಡುತ್ತಿದೆ. ಒಟಿಟಿ ನಿರ್ಮಾಣಕ್ಕೆ ತಗಲುವ ವೆಚ್ಚ, ಸರ್ಕಾರದಿಂದ ಬೇಕಾಗುವ ಅನುದಾನ ಇನ್ನಿತರೆಗಳ ಬಗ್ಗೆಯೂ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಈ ಸಮಿತಿಯಲ್ಲಿ ಕಂಠೀರವ ಸ್ಟುಡಿಯೋದ ಚೇರ್ಮ್ಯಾನ್ ಮೆಹಬೂಬ್ ಪಾಷಾ, ನಟ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಸಿನಿಮಾ ನಿರ್ಮಾಪಕ ಕೆಪಿ ಶ್ರೀಕಾಂತ್, ರಾಕ್ಲೈನ್ ವೆಂಕಟೇಶ್, ಸಿನಿಮಾ ನಟ, ನಿರ್ದೇಶಕ ದುನಿಯಾ ವಿಜಯ್, ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸೋಜಾ ಇನ್ನೂ ಕೆಲವರು ಇದ್ದಾರೆ.
2024 ರಲ್ಲಿ ನೆರೆಯ ಕೇರಳದಲ್ಲಿ ಅಲ್ಲಿನ ರಾಜ್ಯ ಸರ್ಕಾರವು ಒಟಿಟಿ ಫ್ಲ್ಯಾಟ್ಪಾರ್ಮ್ ನಿರ್ಮಾಣ ಮಾಡಿತು. ಸಿ ಸ್ಪೇಸ್ ಹೆಸರಿನ ಈ ಒಟಿಟಿ ಪ್ಲ್ಯಾಟ್ಫಾರ್ಮ್ ಕೇವಲ ಮಲಯಾಳಂ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದು, ಚಿತ್ರರಂಗಕ್ಕೆ ನೆರವು ನೀಡಲೆಂದು ಪ್ರಾರಂಭವಾದ ಒಟಿಟಿ ಇದಾಗಿದೆ. ಈ ಒಟಿಟಿಯಿಂದಾಗಿ ಕಡಿಮೆ ದರಕ್ಕೆ ಮಲಯಾಳಂ ಸಿನಿಮಾಗಳನ್ನು ಪ್ರೇಕ್ಷಕರು ನೋಡುವಂತಾಗಿದೆ. ಇ ಒಟಿಟಿಯು ಪೇ-ಪರ್-ವೀವ್ ಮಾಡೆಲ್ ಮೇಲೆ ಕೆಲಸ ಮಾಡುತ್ತಿದೆ. ಎಷ್ಟು ಹಣ ಬರುತ್ತದೆಯೋ ಅದರಲ್ಲಿ 50% ಅನ್ನು ನಿರ್ಮಾಪಕರಿಗೆ ನೀಡಲಾಗುತ್ತದೆ. ಇದೇ ಮಾದರಿಯ ಒಟಿಟಿ ಕನ್ನಡಕ್ಕಾಗಿಯೂ ನಿರ್ಮಾಣ ಆಗಲಿದೆ.