ಶಿವಮೊಗ್ಗ: ದೊಡ್ಮನೆ ಸೊಸೆ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪತ್ನಿ, ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪ ಅವರ ಮಗಳು ಗೀತಾ ಶಿವರಾಜ್‌ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ನಾನು ಇನ್ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಅಂತ ಘೋಷಿಸಿದ್ದಾರೆ. ತಾವು ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಶಿವಮೊಗ್ಗದಲ್ಲೇ ಚುನಾವಣಾ ರಾಜಕೀಯಕ್ಕೆ ಗೀತಾ ಶಿವರಾಜ್‌ಕುಮಾರ್ ನಿವೃತ್ತಿ ಘೋಷಿಸಿದ್ದಾರೆ.
ಗೀತಾ ಶಿವರಾಜ್‌ಕುಮಾರ್ ಚುನಾವಣೆಯಿಂದ ದೂರ ಸರಿದಿದ್ದಾರೆ. 2024ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್ ಕುಮಾರ್, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದೀಗ ಶಿವಮೊಗ್ಗದಲ್ಲೇ ತಮ್ಮ ಚುನಾವಣಾ ನಿವೃತ್ತಿ ಬಗ್ಗೆ ಘೋಷಿಸಿದ್ದಾರೆ. ಇನ್ಮುಂದೆ ನಾನು ಯಾವುದೇ ಚುನಾವಣೆಗೆ ನಿಲ್ಲೋದಿಲ್ಲ ಅಂತ ಗೀತಾ ಶಿವರಾಜ್‌ಕುಮಾರ್ ಘೋಷಿಸಿದ್ದಾರೆ.
ಪಕ್ಷದ ಸಂಘಟನೆಯಲ್ಲಿ ಮುಂದುವರೆಯೋ ಭರವಸೆ
ಶಿವಮೊಗ್ಗದಲ್ಲಿ ನಡೆದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೀತಾ ಶಿವರಾಜ್‌ಕುಮಾರ್, ತಮ್ಮ ಚುನಾವಣಾ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ ತಾನು ಕಾಂಗ್ರೆಸ್ ಪಕ್ಷದ ಸಂಘಟನಾ ಕೆಲಸದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೀತಾ ಶಿವರಾಜ್‌ಕುಮಾರ್, ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪುರುಷರು ಎಲ್ಲರೂ ನಮ್ಮ ಮುಂದೆ ಕೂತಿರುವುದು ಬಹಳ ಖುಷಿಯಾಗುತ್ತಿದೆ. ಮುಂದೆ ನಾನು ಯಾವ ಎಲೆಕ್ಷನ್‌ಗೂ ನಿಲ್ಲಲ್ಲ. ಆದರೆ ನಿಮ್ಮೆಲ್ಲರ ಜೊತೆಗೆ ನಿಂತಿರುತ್ತೇನೆ ಎಂದಿದ್ದಾರೆ.
ಮುಂದಿನ ಚುನಾವಣೆಗೆ ಬಂದು ಪ್ರಚಾರ ಮಾಡುತ್ತೇನೆ
ಮುಂದಿನ ಚುನಾವಣೆಗೆ ಬಂದು ಕ್ಯಾಂಪೇನ್ ಮಾಡುತ್ತೇನೆ ಅಂತ ಗೀತಾ ಭರವಸೆ ನೀಡಿದ್ದಾರೆ. ಮಂಜುನಾಥ ಭಂಡಾರಿಯವರಿಗೂ ನಾನು ಚುನಾವಣೆಗೆ ಬಂದು ತೊಂದರೆ ಕೊಡೋದಿಲ್ಲ ಎಂದಿದ್ದಾರೆ. ಮಹಿಳೆಯರು ಎಂದಿಗೂ ಅಬಲೆಯರಲ್ಲ, ಎಲ್ಲರೂ ಸಬಲೆಯರು. ಮಹಿಳೆಯರಿಗೆ ಶಕ್ತಿ ನೀಡಿದರೆ ಎಂತಹ ಕೆಲಸವನ್ನಾದರೂ ದಿಟ್ಟವಾಗಿ ಮಾಡುತ್ತಾರೆ ಅಂತ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಮಧು ಬಂಗಾರಪ್ಪರನ್ನು ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳಿ
ಎಲ್ಲರನ್ನೂ ಜೊತೆಗೆ ಇಟ್ಟುಕೊಂಡು ಕೆಲಸ ಮಾಡಿ ಎಂದು ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಗೀತಾ ಶಿವರಾಜ್‌ಕುಮಾರ್ ಕಿವಿಮಾತು ಹೇಳಿದ್ರು. ಕಳೆದ ಹತ್ತು ವರ್ಷಗಳಿಂದ ಶ್ವೇತಾ ಬಂಡಿಯನ್ನು ನಾನು ಬಲ್ಲೆ. ನಿಮ್ಮ ಕಷ್ಟಗಳಿಗೆ ನಾನು ಸ್ಪಂದಿಸುತ್ತೇನೆ. ಏನೇ ಕಷ್ಟವಿದ್ದರೂ ಸಚಿವ ಮಧು ಬಂಗಾರಪ್ಪ ಅವರಿಗೆ ಹಿಡಿದುಕೊಂಡು ಕೆಲಸ ಮಾಡಿಕೊಳ್ಳಿ. ನನ್ನ ತಮ್ಮ ನನ್ನ ಜೊತೆ ಎಂದಿಗೂ ನಿಂತಿರುತ್ತಾನೆ ಅಂತ ಗೀತಾ ಶಿವರಾಜ್‌ಕುಮಾರ್ ಭರವಸೆ ನೀಡಿದ್ದಾರೆ.
ಪ್ರತಿಸಲ ಎಲೆಕ್ಷನ್‌ಗೆ ನಿಲ್ಲಬೇಕು ಅಂತೇನಿಲ್ಲ
ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಗೀತಾ ಶಿವರಾಜ್‌ಕುಮಾರ್, ನಾನು ಪ್ರತಿ ಸಲ ಎಲೆಕ್ಷನ್‌ಗೆ ನಿಲ್ಲಬೇಕು ಅಂತೇನಿಲ್ಲ. ನನ್ನ ಸ್ಥಾನದಲ್ಲಿ ನಾನು ಬೇರೆಯವರನ್ನು ನೋಡಬೇಕು. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ಇನ್ಮುಂದೆ ಚುನಾವಣೆಗೆ ನಿಲ್ಲಲ್ವಂತೆ ಬಂಗಾರಪ್ಪ ಪುತ್ರಿ!
