ಕಲಬುರಗಿ: ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ವಿಪರೀತ ಹಾನಿಯುಂಟಾದ ಹಿನ್ನೆಲೆ ಮಂಗಳವಾರ (ಸೆ.30) ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣದಿಂದ ವೈಮಾನಿಕ ಸಮೀಕ್ಷೆ ಆರಂಭಿಸಲಿದ್ದಾರೆ. ವೈಮಾನಿಕ ಸಮೀಕ್ಷೆಯ ನಂತರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.
ಕಲಬುರಗಿಯಲ್ಲಿ ಕಾಗಿಣಾ ನದಿ ಪ್ರವಾಹಕ್ಕೆ ಸೇಡಂ ತಾಲೂಕಿನ ಮಳಖೇಡ ತಾಂಡಾದ ಹಲವು ಮನೆಗಳಿಗೆ ನೀರು ನುಗ್ಗಿದೆ. ಒಂದು ತಿಂಗಳ ಕಂದಮನನ್ನು ಹೊತ್ತು ಎರಡು ದಿನಗಳಿಂದ ಛಾವಣಿ ಮೇಲೆ ತಾಯಿ ಆಶ್ರಯ ಪಡೆದಿದ್ದಾಳೆ. ಜೇವರ್ಗಿ ತಾಲೂಕಿನ ಮಾಹೂರ ಗ್ರಾಮ ನಡುಗಡ್ಡೆಯಾಗಿದೆ. ಶಾಸಕ ಡಾ.ಅಜಯ್ ಸಿಂಗ್ ಬೋಟ್‌ನಲ್ಲಿ ಮಾಹೂರ ಗ್ರಾಮಕ್ಕೆ ಭೇಟಿ ನೀಡಿ, ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಚಿಂಚೋಳಿ ತಾಲೂಕಿನ ಜೆಟ್ಟೂರ್ ಗ್ರಾಮದಲ್ಲಿ ಹಳ್ಳದ ನೀರು ಕೊಟ್ಟಿಗೆ ನುಗ್ಗಿ 42 ಎತ್ತುಗಳು ಮೃತಪಟ್ಟಿದ್ದು, 5 ಜಾನುವಾರು ನೀರು ಪಾಲಾಗಿವೆ.
ಇನ್ನೂ ಭೀಮಾ ನದಿಯ ಅಬ್ಬರಕ್ಕೆ ಯಾದಗಿರಿ ನಗರದಲ್ಲಿನ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ನಗರದ ಹಲವು ಪ್ರಮುಖ ರಸ್ತೆಗಳು ಬಂದ್ ಆಗಿರುವುದರಿಂದ ಜನ ಪರದಾಟ ನಡೆಸಿದ್ದಾರೆ. ಹೀರೇಹಳ್ಳದ ಸೇತುವೆ ಮುಳುಗಡೆಯಿಂದ ಯಾದಗಿರಿ-ಕಲಬುರಗಿ ರಸ್ತೆ ಮಾರ್ಗ ಬಂದ್ ಆಗಿದೆ. ಇನ್ನೂ ಗಡಿಜಿಲ್ಲೆ ಬೀದರ್‌ನಲ್ಲಿ ಭಾರೀ ಮಳೆಯಾಗಿದೆ. ಭಾಲ್ಕಿಯ ಎಡದಂಡೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಎಕರೆ ಬೆಳೆ ನೀರುಪಾಲಾದ್ರೆ ಕಟ್ಟಿತೂಗಾಂವ್ ಗ್ರಾಮದ ಮಹಾದೇವ ದೇವಸ್ಥಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಮಹಾರಾಷ್ಟ್ರದಿಂದ ಡ್ಯಾಂಗಳಿಗೆ ಭಾರೀ ಪ್ರಮಾಣದಿಂದ ನೀರು ಬಿಟ್ಟಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.