ಬೆಂಗಳೂರು: ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಕರೆಯಿಸಿಕೊಳ್ಳುವ ಬೆಂಗಳೂರು ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಕೆಲ ವಿಚಾರಗಳಿಂದ ಖ್ಯಾತಿ ಪಡೆದರೆ, ಕೆಲ ವಿಚಾರಗಳಿಗೆ ಅಪಖ್ಯಾತಿಯೂ ಪಡೆದುಕೊಂಡಿದೆ. ಸದ್ಯ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ದೇಶದಲ್ಲೇ ಬೆಂಗಳೂರು ಟಾಪ್ ಸ್ಥಾನದಲ್ಲಿದೆ. ಇಂತಹದೊಂದು ಆಘಾತಕಾರಿ ವರದಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಹಿರಂಗ ಪಡಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ಮಾಹಿತಿ ಪ್ರಕಾರ, 2023ರಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ವರದಕ್ಷಿಣೆ ಸಂಬಂಧಿತ ಪ್ರಕರಣಗಳು ದಾಖಲಾಗಿರುವುದು ವರದಿಯಾಗಿದೆ. ಒಟ್ಟು 1,013 ದೂರುಗಳು ದಾಖಲಾಗಿದ್ದು, ಇದು ಇತರೆ 18 ಮೆಟ್ರೋ ನಗರಗಳಲ್ಲಿ ದಾಖಲಾದ ಕೇಸ್ಗಳಿಂತ ಹೆಚ್ಚಾಗಿದೆ ಎಂದು ಎಸ್ಸಿಆರ್ಬಿ ತಿಳಿಸಿದೆ.
ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪಾಟ್ನಾದಲ್ಲಿ 104 ಪ್ರಕರಣಗಳು ದಾಖಲಾದರೆ, ಲಕ್ನೋನಲ್ಲಿ ಕೇವಲ 19 ಪ್ರಕರಣಗಳು ದಾಖಲಾಗಿರುವುದು ವರದಿ ಆಗಿದೆ. ಆದರೆ ಬೆಂಗಳೂರಿನಲ್ಲಿ ಸಾವಿರಾರು ದೂರುಗಳು ದಾಖಲಾಗಿದೆ. ಹಾಗಂತ ಅಪರಾಧಗಳು ನಡೆಯುತ್ತಿವೆ ಎಂದು ಅರ್ಥವಲ್ಲ, ಬದಲಿಗೆ ಹೆಚ್ಚಿನ ಮಹಿಳೆಯರು ತಮಗಾದ ದೌರ್ಜನ್ಯದ ಬಗ್ಗೆ ದೂರು ನೀಡಲು ಮುಂದೆ ಬರುತ್ತಿದ್ದಾರೆ ಎಂಬುವುದನ್ನು ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಹಿರಂಗ ಪಡಿಸಿದ ಮಾಹಿತಿಯ ಪ್ರಕಾರ 2023ರಲ್ಲಿ ಕರ್ನಾಟಕದ ಒಟ್ಟಾರೆ ಪರಿಸ್ಥಿತಿ ನೋಡಿದರೆ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲಿನ ಅಪರಾಧಗಳಲ್ಲಿ ಹೆಚ್ಚಳ ಕಂಡುಬಂದಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಸಂಭವಿಸಿದ್ದ ಅಪರಾಧ ಸಂಖ್ಯೆ ಶೇಕಡಾ 14 ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಅದರಲ್ಲೂ ಬೆಂಗಳೂರಿನಲ್ಲಿ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿತ್ತು. ಅಂದರೆ ಹಿಂಸಾಚಾರ, ಕೊಲೆ, ಅಪಹರಣ, ಹಿರಿಯ ನಾಗರಿಕರ ಮೇಲಿನ ಹಲ್ಲೆ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡಿತ್ತು. ಪ್ರಮುಖವಾಗಿ ನಗರದಲ್ಲಿ ಮಹಿಳೆಯರ ಮೇಲಿನ ಅಪರಾಧ ಸಂಖ್ಯೆ ಶೇಕಡಾ 24 ಕ್ಕಿಂತ ಹೆಚ್ಚಾಗಿತ್ತು.
ಇನ್ನು ಇದರೊಂದಿಗೆ ರಸ್ತೆ ಅಪಘಾತ ಸಾವು-ನೋವು ಪ್ರಕರಣಗಳಲ್ಲಿಯೂ ರಾಜ್ಯ ಉನ್ನತ ಸ್ಥಾನದಲ್ಲಿದೆ. ರಸ್ತೆ ಅಪಘಾತಕ್ಕೆ 12,322 ಜೀವಗಳು ಬಲಿಯಾಗಿದ್ದವು. 13 ಸಾವಿರಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿರುವುದು ಸಹ ಕಳವಳಕಾರಿಯಾಗಿದೆ.