ಬಳ್ಳಾರಿ: 5.20 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಿದ ಘಟನೆ ಹೊಸಪೇಟೆ ಹೊರವಲಯದಲ್ಲಿ ನಡೆದಿದ್ದು, ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಮೃತ ವ್ಯಕ್ತಿಯನ್ನು ಹೊಸಪೇಟೆಯ ಕೌಲ್ ಪೇಟೆಯ ನಿವಾಸಿ ಗಂಗಾಧರ ಹಾಗೂ ಬಂಧಿತರನ್ನು ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಅಜೇಯ, ರಿಯಾಜ್, ಯೋಗರಾಜ್ ಸಿಂಗ್, ನಕಲಿ ಹೆಂಡತಿ ಹುಲಿಗೆಮ್ಮ ಎಂದು ಗುರುತಿಸಲಾಗಿದೆ.
ಖದೀಮರು ಮೃತ ಗಂಗಾಧರ್ ಹೆಸರಲ್ಲಿ 5.20 ಕೋಟಿ ರೂ. ಇನ್ಶೂರೆನ್ಸ್ ಮಾಡಿಸಿದ್ದರು. ಈ ಹಣವನ್ನು ಪಡೆಯುವ ಆಸೆಯಿಂದಾಗಿ ಕೊಲೆಗೆ ಸಂಚು ಹೂಡಿದ್ದರು. ಮೊದಲು ಕೊಲೆ ಮಾಡಿ, ಬಳಿಕ ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಕರೆತಂದಿದ್ದರು. ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್‌ನ್ನು ಬಾಡಿಗೆಗೆ ತಂದು, ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿದ್ದರು. ಅಪಘಾತವೆಂದು ಬಿಂಬಿಸುವಂತೆ ಮಾಡಿ, ಪರಾರಿಯಾಗಿದ್ದರು.
ಈ ಕುರಿತು ಮೃತನ ಪತ್ನಿ ಹೊಸಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪಘಾತವಾದರೆ ಬೈಕ್ ಬೀಗ ಗಾಡಿಯಲ್ಲಿರಬೇಕು ಇಲ್ಲ, ಕೆಳಗೆ ಬಿದ್ದಿರಬೇಕು. ಆದರೆ ಬೀಗ ಸೈಡ್ ಬ್ಯಾಗ್‌ನಲ್ಲಿದೆ ಎಂದು ಅನುಮಾನಗೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕಾರು, ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ.