ಬೆಂಗಳೂರು: ಇತ್ತೀಚಿಗೆ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಿವೆ. ಖ್ಯಾತ ನಟ, ನಟಿಯಿರಿಂದ ಹಿಡಿದು ಜನಸಾಮಾನ್ಯರವರೆಗೂ ಎಲ್ಲರೂ ಸೈಬರ್ ಅಪರಾಧಕ್ಕೆ ಸಿಲುಕುತ್ತಿದ್ದಾರೆ. ಬೆಂಗಳೂರಿನಲ್ಲೀಗ ಜಂಟಿ ಸೈಬರ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅಪರಾಧಕ್ಕೆ ಒಳಗಾದವರಲ್ಲಿ ಓರ್ವ ಇಂಜಿನಿಯರ್ ಮತ್ತು ಇನ್ನೋರ್ವ ಖಾಸಗಿ ಸಂಸ್ಥೆಯ ಉದ್ಯೋಗಿ. ಹಲವು ತಿಂಗಳುಗಳಿಂದ ಇಬ್ಬರೂ ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ 2.28 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದ್ದಾರೆ. ಕಳೆದ 2 ವಾರಗಳಲ್ಲಿ ಈಸ್ಟ್ ಸೈಬರ್ ಕ್ರೈಮ್ ಪೊಲೀಸರು ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿಯಾದ ರಾಮನಾಥ್ ಎಸ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಈ ಪ್ರಕರದಲ್ಲಿ ಬರೋಬ್ಬರಿ 1.40 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. 45 ವರ್ಷದ ರಾಮನಾಥ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷದಿಂದ ಒಂದು ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು. ಆದರೆ ಈಗ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ.
ಇವರಿಗೆ 2024 ಡಿಸೆಂಬರ್ನಲ್ಲಿ ವಾಟ್ಸಾಪ್ ಮೂಲಕ ರಾಣಿ ಸಾಹ ಎಂಬ ಮಹಿಳೆಯ ಪರಿಚಯವಾಗಿತ್ತು. ಆಕೆ ತಾನು ಆನ್ಲೈನ್ ಹೂಡಿಕೆಗಳ ಮೂಲಕ ಕೊಟ್ಯಾಧಿಪತಿಯಾಗಿರುವುದಾಗಿ ಮೆಸೇಜ್ನಲ್ಲಿ ತಿಳಿಸಿದ್ದಳು. ಆನಂತರ ರಾಮನಾಥರನ್ನು ಒಂದು ವಾಟ್ಸಾಪ್ ಗ್ರೂಪ್ನಲ್ಲಿ ಸೇರಿಸಲಾಯಿತು. ಅಲ್ಲಿಂದ ರವಿ ಕಮಾರ್ ಎನ್ನುವವರ ಪರಿಚಯವಾಗಿತ್ತು. ಕೆಲಸದ ಮೇಲೆ ಯು.ಕೆಗೆ ಹೋದಾಗ ಕುಮಾರ್ ಇವರ ಮನವೊಲಿಸಿ 10,000 ರೂ.ಗಳ ಹೂಡಿಕೆ ಮಾಡಿಸಿದ್ದ. ಈ ಹೂಡಿಕೆಯಿಂದ ಸಣ್ಣ ಸಣ್ಣ ಲಾಭಗಳು ಸಿಗಲು ಶುರುವಾದ ಮೇಲೆ ಈ ಯೋಜನೆಯನ್ನು ರಾಮನಾಥ ಸಂಪೂರ್ಣವಾಗಿ ನಂಬಿದ್ದರು.
ನಂತರ ಕ್ಯಾಂಬ್ರಿಡ್ಜ್ ಯೂನಿವರ್ಸಿಟಿಯ ದಿವಾಕರ್ ಎನ್ನುವವರನ್ನು ಇವರಿಗೆ ಪರಿಚಯಿಸಲಾಯಿತು. ಹೀಗೆ ಅವರು 10 ತಿಂಗಳುಗಳ ಕಾಲ ಅವರ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದರು. ಇದರಿಂದ ಬರೋಬ್ಬರಿ 1,40,14,197 ರೂ.ಗಳನ್ನು ವರ್ಗಾಯಿಸಿದ್ದರು. ಹೂಡಿಕೆಯ ಲಾಭವನ್ನು ಪಡೆಯಲು ಹೋದಾಗಲೆಲ್ಲ ಸರ್ವಿಸ್ ಚಾರ್ಜ್ ಹೆಸರಿನಲ್ಲಿ 5% ಹಣವನ್ನು ಪಾವತಿಸಲು ಹೇಳುತ್ತಿದ್ದರು. ಇದರಿಂದ ಶಂಕೆಗೊಳಗಾದ ರಾಮನಾಥ್ ತಮ್ಮ ಸ್ನೇಹಿತರೊಂದಿಗೆ ಮಾತನಾಡಿ ತಾನು ಎಷ್ಟು ದೊಡ್ಡ ಹಗರಣದಲ್ಲಿ ಸಿಲುಕಿದ್ದೇನೆ ಎಂದು ತಿಳಿದುಕೊಂಡರು.
ಇನ್ನೋರ್ವ ಬಲಿ ಪಶುವಾದ ಖಾಸಗಿ ಸಂಸ್ಥೆಯ ಉದ್ಯೋಗಿ ಸನತ್ ಪಿ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನ ಬಾಣಸವಾಡಿಯ ನಿವಾಸಿ. 2025 ರ ಜೂನ್ನಿಂದ ಸೆಪ್ಟೆಂಬರ್ ತಿಂಗಳಿನ ಅಂತರದಲ್ಲಿ 88.36 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ತಾನು ಒಂದು ಸೆಬಿ- ರಿಜಿಸ್ಟರ್ಡ್ ಕಂಪನಿಯಾದ ಓಡೊಮ್ಯಾಕ್ಸ್/ಒಪೆನಹೈಮರ್ ಎಂಬಲ್ಲಿ ಹೂಡಿಕೆ ಮಾಡುತ್ತಿದ್ದೇನೆಂದು ಭಾವಿಸಿ ಮೋಸಹೋಗಿದ್ದಾರೆ.
ಸೈಬರ್ ಅಪರಾಧಿಗಳು ಇವರೊಂದಿಗೆ ಒಂದು ನಕಲಿ ಟ್ರೇಡಿಂಗ್ ಆ್ಯಪ್ ಒಂದನ್ನು ಹಂಚಿಕೊಂಡಿದ್ದರು. ಅದನ್ನು ಡೌನ್ಲೊಡ್ ಮಾಡಿಕೊಂಡ ಸನತ್, ನಿರಂತರ ಹೂಡಿಕೆ ಮಾಡಿದ್ದಾರೆ. ಅವರ ಕಣ್ಣು ಕಟ್ಟಲು ಅವರ ಹೂಡಿಕೆಯು ಬೆಳೆಯುತ್ತಿರುವುದನ್ನೂ ಆ ನಕಲಿ ಆ್ಯಪ್ನಲ್ಲಿ ತೋರಿಸಲಾಗಿತ್ತು. 8.40 ಲಕ್ಷ ಹಣವನ್ನು ತನ್ನ ಸಂಬಂಧಿಯೊಬ್ಬರಿಂದ ಪಡೆದು ಹೂಡಿಕೆಮಾಡಿ ಕೇವಲ 50,000 ರೂ.ಗಳನ್ನಷ್ಟೇ ಹಿಂಪಡೆದಿದ್ದರು. ಹಲವಾರು ಬಾರಿ ಹಣ ಹಿಂಪಡೆಯುವಲ್ಲಿ ವಿಫಲರಾದಾಗ ಇದು ಸೈಬರ್ ವಂಚೆಯೆಂದು ತಿಳಿದು ಬಂದಿದೆ. ರಾಮನಾಥ್ ಮತ್ತು ಸನತ್ ಇಬ್ಬರೂ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಇಬ್ಬರ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.