Ad image

ದಸರಾ ಮುಗಿಯುತ್ತಿದ್ದಂತೆ ಪವರ್ ಶೇರಿಂಗ್ ‘ಗುಂಪು ಘರ್ಷಣೆ’ ಶುರು

Team SanjeMugilu
2 Min Read

ಬೆಂಗಳೂರು: ಮಂಡ್ಯ ಕಾಂಗ್ರೆಸ್‌ ಮುಖಂಡ ಡಿಕೆಶಿಯವ್ರ ಆಪ್ತ ಶಿವರಾಮೇಗೌಡ ನವೆಂಬರ್‌ಗೆ ಡಿ.ಕೆ ಶಿವಕುಮಾರ್‌  ಸಿಎಂ ಆಗೇ ಆಗ್ತಾರೆ ಅಂತ  ಹೇಳಿದ್ರು. ಆದರೆ ಮುಂದಿನ ವರ್ಷನೂ ಮೈಸೂರು ದಸರಾದಲ್ಲಿ ನಾನೇ ಪುಷ್ಪಾರ್ಚನೆ ಮಾಡ್ತೀನಿ. ನಾನೇ ಸಿಎಂ ಆಗಿರ್ತೀನಿ ಅಂತ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ರು. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌‌ ಪವರ್‌ ಶೇರಿಂಗ್‌ ಬಗ್ಗೆ ಯಾರೇ ಮಾತಾಡಿದ್ರೂ ಶಿಸ್ತುಕ್ರಮ ತಗೊಳ್ತೀವಿ. ಪವರ್‌ ಶೇರಿಂಗ್‌ ಬಗ್ಗೆ ಮಾತಾಡೋರು ಪಕ್ಷ ವಿರೋಧಿಗಳು ಅಂತ ಸಿಟ್ಟು ಹೊರಹಾಕಿದ್ದರು.
ಬೆಂಗಳೂರು ಕಾಂಗ್ರೆಸ್‌ ಕಚೇರಿಯಲ್ಲಿ ಡಿ.ಕೆ ಶಿವಕುಮಾರ್‌ ಹೀಗೆ ಹೇಳಿಕೆ ಕೊಟ್ಟ ಮರುಕ್ಷಣವೇ ಬಿ.ಕೆ.ಹರಿಪ್ರಸಾದ್‌ ಅಚ್ಚರಿ ಹೇಳಿಕೆ ಕೊಟ್ಟರು. ಮುಖ್ಯಮಂತ್ರಿ ಕುರ್ಚಿ ಹಂಚಿಕೆ ವಿಷ್ಯ ಮೂವರಿಗಷ್ಟೇ ಗೊತ್ತಿದೆ. ನಾವ್ಯಾರು ಮಾತಾಡಂಗಿಲ್ಲ ಅಂತ ಸೂಚನೆಯಿದೆ ಅಂತ ಟ್ವಿಸ್ಟ್‌ ಇಟ್ಟರು.
ಬಿಜೆಪಿ ಪೋಸ್ಟ್ ನಲ್ಲಿ ಏನಿದೆ?
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ನವೆಂಬರ್‌ಗೆ ಡಿ.ಕೆ ಶಿವಕುಮಾರ್‌ ಅವ್ರಿಗೆ ಕುರ್ಚಿ ಬಿಟ್ಟು ಕೊಡ್ತಾರೆ ಅನ್ನೋ ಕೂಗೆದ್ದಿದೆ. ಬಿಹಾರ ಚುನಾವಣೆ ಆದ್ಮೇಲೆ ರಾಜ್ಯದಲ್ಲಿ ಪವರ್‌ ಶೇರಿಂಗ್‌‌ ಗ್ಯಾರಂಟಿ ಅಂತ ಕಾಂಗ್ರೆಸ್‌ನವ್ರೇ ಶುರುಮಾಡಿದ್ದಾರೆ. ಇದಕ್ಕೆ ಪುಷ್ಟಿ ಕೊಡೋಥರ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ನವೆಂಬರ್ ಕ್ರಾಂತಿಗೆ ಸಜ್ಜಾದ ಭಂಡ ಹಾಗೂ ಭ್ರಷ್ಟರು ಅಂತಾನೂ ಪೋಸ್ಟ್‌ ಹಾಕಿದೆ. ಬಿಜೆಪಿಯವ್ರ ಹೇಳಿಕೆಗೂ ಡಿಸಿಎಂ ತಿರುಗೇಟು ಕೊಟ್ಟಿದ್ದು, ಅವರ ಪಕ್ಷದಲ್ಲಿನ ಅಂತರಿಕ ಸಮಸ್ಯೆಗಳನ್ನು ಪರಿಹಾರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ಹೇಳಿದ್ದೇನು?
ಪವರ್ ಶೇರಿಂಗ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಜೋಶಿ, ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಹಾಗೂ ಚೇಲಾಗಳು ನವೆಂಬರ್ ನಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಅಂತ ಹೇಳುತ್ತಿದ್ದಾರೆ. ಆದರೆ ಇವರು ಇಲ್ಲ ಅಂತರೇ, ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರೇ ಇದನ್ನ ಮಾಡಿದ್ದಾರೆ ಅಂತಾರೆ ಎಂದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ನವೆಂಬರ್ ನಲ್ಲಿ ಕಾಂಗ್ರೆಸ್ ಕ್ರಾಂತಿ ಆಗೋದು ನಿಜ, ಆ ಬಳಿಕ ವಾಂತಿ ಆಗೋದು ನಿಜ ಎಂದರು.
ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಇರ್ತಾರೆ ಅನ್ನೋದು ನಮ್ಮ ಭಾವನೆ. ನವೆಂಬರ್ ನಲ್ಲಿ ಗಾಂಧಿ ಜಯಂತಿ ಇರೋದು ಅಂದರೆ ಶಾಂತಿ, ಯಾವುದೇ ಕ್ರಾಂತಿ ಅಂತ ಹೇಳಬಾರದು ಎಂದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಿಎಂ ಆಗಬೇಕು ಅಂತ ಯಾರು ಇದ್ದರೆ ಅಂದರೆ ಅದು ಡಿ.ಕೆ ಶಿವಕುಮಾರ್ ಒಬ್ಬರೇ ಅಲ್ವಾ! ಈಗ ಅವರೇ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಅಂತ ಹೇಳಿದ್ದಾರೆ. ಅಲ್ಲಿದೆ ನವೆಂಬರ್ ಕ್ರಾಂತಿ ಅನ್ನೋದು ಭ್ರಮೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ದಸರಾ ವೇಳೆ ಕಾಕತಾಳೀಯ!
ಪವರ್‌ ಶೇರಿಂಗ್‌ ಚರ್ಚೆ ಮಧ್ಯೆನೇ ಮೈಸೂರು ಜಂಬೂಸವಾರಿಯಲ್ಲಿ ಸಿಎಂ ಡಿಸಿಎಂ ಒಟ್ಟಿಗೆ ಕಾಣಿಸಿಕೊಂಡರು. ಒಟ್ಟಿಗೆ ಅರಮನೆ ಆವರಣಕ್ಕೆ ಬಂದು ನಂದಿಧ್ವಜಕ್ಕೆ ಪೂಜೆನೂ ನೆರವೇರಿಸಿದರು.
ಕಾಕತಾಳೀಯವೋ ಏನೋ ಸಿಎಂ ನಂದಿಧ್ವಜಕ್ಕೆ ಈಡುಗಾಯಿ ಒಡೆಯಲು 2 ಸಲ ವಿಫಲರಾಗಿ 3ನೇ ಸಲ ಸಕ್ಸಸ್‌ ಆದ್ರು. ಆಮೇಲೆ ಬಂದ ಡಿ.ಕೆ.ಶಿವಕುಮಾರ್‌ ಕೂಡ ಈಡುಗಾಯಿ ಹೊಡೆಯೋಕೆ 2 ಸಲ ವಿಫಲರಾಗಿ 3ನೇ ಸಲ ಸಕ್ಸಸ್‌ ಆದ್ರು. ಸಿಎಂ ಕುರ್ಚಿ ವಿಷ್ಯದಲ್ಲೂ ಇದೇ ಆಗ್ತಿದೆ ಅಂತ ಈಗ ಅನೇಕರು ಚರ್ಚೆ ಶುರುಮಾಡಿದ್ದಾರೆ. ನವೆಂಬರ್‌‌‌ನಲ್ಲಿ ನಿಜಕ್ಕೂ ರಾಜ್ಯದಲ್ಲಿ ಕುರ್ಚಿ ಹಂಚಿಕೆ ಆಗುತ್ತಾ ಇಲ್ವಾ ಗೊತ್ತಿಲ್ಲ. ಆದ್ರೆ ಮುಂದಿನ ಸಲ ಮೈಸೂರು ದಸರಾದಲ್ಲಿ ನೀವು ಇರ್ತೀರಾ ಅನ್ನೋ ಪ್ರಶ್ನೆಗೆ ಸಿಎಂ ಐ ಹೋಪ್‌ ಸೋ ಅಂದಿರೋದು ಮತ್ತಷ್ಟು ಪ್ರಶ್ನೆ ಹುಟ್ಟುಹಾಕಿದೆ.

Share This Article