ಬೆಂಗಳೂರು: ಕಾಂಗ್ರೆಸ್‌ನ ವೀರಶೈವ, ಲಿಂಗಾಯತ ಸಚಿವರಲ್ಲಿ ಮತ್ತೊಮ್ಮೆ ಬಿರುಕು ಶುರುವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿನ ವಿಚಾರದಲ್ಲಿ ಮೂಡಿರುವ ಅಸಮಾಧಾನ ಮತ್ತೊಮ್ಮೆ ಸಚಿವ ಈಶ್ವರ್ ಖಂಡ್ರೆ ವರ್ಸಸ್ ಎಂ.ಬಿ ಪಾಟೀಲ್ ಫೈಟ್ ಜೋರಾಗುವ ಸಾಧ್ಯತೆಯಿದೆ.
ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು. ವೀರಶೈವರು ಲಿಂಗಾಯತದ ಒಂದು ಭಾಗ ಎಂದು ಎಂಬಿ ಪಾಟೀಲ್ ಹೇಳಿದರೆ ವೀರಶೈವ – ಲಿಂಗಾಯತ ಎರಡೂ ಒಂದೇ ಎಂಬ ವಾದವನ್ನು ಈಶ್ವರ್ ಖಂಡ್ರೆ ಪುನರುಚ್ಚರಿಸಿದ್ದಾರೆ.
2017 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಇದೇ ವಿಚಾರದಲ್ಲಿ ವಿವಾದದ ಕಿಡಿ ಹೊತ್ತಿತ್ತು. ಈಗ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮ ಕೂಗು ಎದ್ದ ಬೆನ್ನಲ್ಲೇ ಮತ್ತೆ ವೀರಶೈವ, ಲಿಂಗಾಯತ ನಾಯಕರ ಮಧ್ಯೆ ಜಟಾಪಟಿ ಜೋರಾಗುವ ಸಾಧ್ಯತೆಯಿದೆ.
ಈಶ್ವರ್ ಖಂಡ್ರೆ ಹೇಳಿದ್ದೇನು?
ವೀರಶೈವ-ಲಿಂಗಾಯತ ಎರಡೂ ಒಂದೇ. ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೊಡಬೇಕು ಎಂಬುದು ಮಹಾಸಭಾದ ಅಭಿಪ್ರಾಯ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಿಲುವು ಸ್ಪಷ್ಟವಾಗಿ ಹೇಳಿದ್ದೇನೆ. ಲಿಂಗಾಯತ-ವೀರಶೈವ ಎರಡು ಒಂದೇ. ಶಿವಕುಮಾರ ಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಎಲ್ಲಾ ಅಧ್ಯಕ್ಷರು ಳು ಇವತ್ತು ವೀರಶೈವ-ಲಿಂಗಾಯತ ಎರಡು ಸಮಾನಾರ್ಥಕ ಪದಗಳು ಇವೆ ಅಂತ ಹೇಳಿವೆ. ವೀರಶೈವ-ಲಿಂಗಾಯತ ಭಿನ್ನ ಇಲ್ಲ.ಇಷ್ಟ ಲಿಂಗ ಪೂಜೆ ಮಾಡುವವರು, ಅಷ್ಟಾವರಣ ವ್ಯವಸ್ಥೆ ಪಾಲನೆ ಮಾಡುವರು, ಗುರುಗಳು ಇದ್ದಾರೆ, ವಿರಕ್ತರು ಇದ್ದಾರೆ. ಹೀಗಾಗಿ ಎಲ್ಲರು ಒಗ್ಗಟ್ಟಾಗಿ, ಸಂಘಟಿತರಾಗಿ ಇರಬೇಕು.ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ಯಾವುದೇ ಉಪಯೋಗ ಆಗೊಲ್ಲ ಎಂಬುದು ನಮ್ಮ ನಿಲುವು. ಆ ನಿಲುವಿಗೆ ನಾವು ಬದ್ದರಾಗಿದ್ದೇವೆ ಎಂದರು.
ಪ್ರತ್ಯೇಕ ಲಿಂಗಾಯತ ಧರ್ಮದಲ್ಲಿ ಮಹಾಸಭಾದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾಸಭಾ ಇವತ್ತು ಅಲ್ಲ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು 2000 ಇಸವಿಯಿಂದ ನಡೆದ ಜನಗಣತಿ ಸಮಯದಲ್ಲಿ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಾಗಿದೆ . ಭೌಗೋಳಿಕವಾಗಿ ನಾವೆಲ್ಲರು ಹಿಂದೂಗಳೇ ಆದರೂ ನಮ್ಮ ಆಚಾರ-ವಿಚಾರದಲ್ಲಿ ಸಿಖ್, ಜೈನರು, ಬೌದ್ದ, ಪಾರ್ಸಿ ಗಳಿಗೆ ಪ್ರತ್ಯೇಕ ಧರ್ಮ ಅಂತ ಕೊಡಲಾಗಿದೆ. ಅದೇ ಆಧಾರದಲ್ಲಿ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡಬೇಕು ಅಂತ ಪದೇ ಪದೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜನಗಣತಿಯಲ್ಲೂ ಪ್ರತ್ಯೇಕ ಕಾಲಂ ಕೊಡಬೇಕು ಅಂತ ವಿನಂತಿ ಮಾಡಿದ್ದೇವೆ. ಇಲ್ಲಿವರೆಗೂ ಸರ್ಕಾರ ಅದನ್ನ ಗುರುತಿಸಿಲ್ಲ. ನಮ್ಮ ಮಹಾಸಭೆಯ ವತಿಯಿಂದ ಇನ್ನು ಮುಂದೆಯೂ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲು ಪ್ರಯತ್ನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪ್ರತ್ಯೇಕ ಧರ್ಮದ ವಿಚಾರ ಮತ್ರು ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಜನಸಮುದಾಯದ ನಾಯಕರು ಇದ್ದಾರೆ. ನಾವು ಯಾರಾದರೂ ಪ್ರತ್ಯೇಕ ಧರ್ಮದ ಬಗ್ಗೆ ಅವರ ಬಳಿ ಮಾತಾಡಿದ್ರೆ ಸಿಎಂ ನಿರ್ಧಾರ ತೆಗೆದುಕೊಳ್ತಾರೆ. ಮೊದಲು ಕೂಡಾ ನೀವೆಲ್ಲರೂ ಬಂದು ಏನ್ ಹೇಳುತ್ತಿರೋ ಅದನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆಯೇ ವಿನಾ: ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.