ಜೈಪುರ: ಇಲ್ಲಿನ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ 6 ಮಂದಿ ರೋಗಿಗಳು ಸಜೀವ ದಹನವಾಗಿದ್ದಾರೆ.
ಇದೀಗ ಶಾರ್ಟ್ ಸರ್ಕ್ಯೂಟ್‌ನಿಂದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಐವರು ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಎರಡು ಐಸಿಯುಗಳಿದ್ದವು. ಒಂದರಲ್ಲಿ 11 ರೋಗಿಗಳು, ಮತ್ತೊಂದರಲ್ಲಿ 13 ರೋಗಿಗಳಿದ್ದರು ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಾಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷ ರೋಗಿಗಳು ಮೃತಪಟ್ಟಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ಟ್ರಾಮಾ ಸೆಂಟರ್ ಉಸ್ತುವಾರಿ ಡಾ.ಅನುರಾಗ್ ಧಾಕಡ್ ತಿಳಿಸಿದ್ದಾರೆ.
ಆಸ್ಪತ್ರೆಯ ದಾಖಲೆ ಪತ್ರಗಳು, ಐಸಿಯು ಉಪಕರಣಗಳು, ಲ್ಯಾಬ್ ಬೆಂಕಿಗಾಹುತಿಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ, ಸತತ 2 ಗಂಟೆಗಳ ಕಾರ್ಯಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.
ಇನ್ನೂ ದುರಂತ ಸಂಭವಿಸುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿಯು ರೋಗಿಗಳ ರಕ್ಷಣೆಗೆ ನಿಲ್ಲದೇ ಸ್ಥಳದಿಂದ ಓಡಿಹೋಗಿದ್ದಾರೆಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.