Ad image

ರಾಜ್ಯದ 15 ಜಿಲ್ಲೆಗಳ 252 ಗ್ರಾ.ಪಂ.ಗಳಲ್ಲಿ ʻನೀರಿದ್ದರೆ ನಾಳೆʼ ಯೋಜನೆ ಅನುಷ್ಠಾನ

Team SanjeMugilu
1 Min Read

ಬೆಂಗಳೂರು: ರಾಜ್ಯದ 15 ಜಿಲ್ಲೆ, 27 ತಾಲ್ಲೂಕುಗಳಲ್ಲಿನ ಅಂತರ್ಜಲ ಅತಿಬಳಕೆಯ ಪಟ್ಟಿಯಲ್ಲಿರುವ 252 ಗ್ರಾಮ ಪಂಚಾಯ್ತಿಗಳಲ್ಲಿ ʻನೀರಿದ್ದರೆ ನಾಳೆʼ ಯೋಜನೆಯನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಮಹತ್ವಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಚಾಲನೆ ನೀಡಲಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು  ತಿಳಿಸಿದರು.

ವಿಕಾಸಸೌಧ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಕೃತಿಯಿಂದ ವರದಾನವಾಗಿ ಬಂದಿರುವ ನೈಸರ್ಗಿಕ ಹಾಗೂ ನಮ್ಮ ಪೂರ್ವಜರು ನಿರ್ಮಿಸಿದ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಿ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ ʻನೀರಿದ್ದರೆ ನಾಳೆʼ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ನೀರಿನ ಮಹತ್ವ ತಿಳಿಸುವುದು, ರಾಜ್ಯದ ಜಲ ಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರಿಕರನ್ನ ನೀರಿನ ಸಂರಕ್ಷಣೆಯ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳ 27 ತಾಲ್ಲೂಕುಗಳ 525 ಅಂತರ್ಜಲ  ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ 100ಕ್ಕೂ ಹೆಚ್ಚು ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಿವೆ ಎಂದರು.

ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಸಿಷ್ಠ ಸಿಂಹ  ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ನಾಳೆ ವಿಧಾನಸೌಧದ ಬ್ವಾಂಕ್ವೆಟ್‌ ಹಾಲ್‌ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರಾಜ್ಯದಲ್ಲಿ ಅಂತರ್ಜಲ ಸಾಕ್ಷರತೆಗೆ ಒತ್ತು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ದಿ ಇಲಾಖೆ ಕಾರ್ಯದರ್ಶಿಗಳಾದ ಬಿ.ಕೆ ಪವಿತ್ರ ಅವರು ಉಪಸ್ಥಿತರಿದ್ದರು.

Share This Article