ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ‘ಇಂದಿರಾ ಆಹಾರ ಕಿಟ್’ ವಿತರಣೆಗೆ ಅನುಮೋದನೆ ನೀಡಲಾಗಿದೆ. ಈ ನಿರ್ಣಯವು ಬಿಪಿಎಲ್ ಕುಟುಂಬಗಳ ಪೌಷ್ಟಿಕ ಆಹಾರವನ್ನು ಖಚಿತಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರಸ್ತಾವನೆಯನ್ನು ಸಂಪುಟವು ಒಪ್ಪಿಕೊಂಡಿದೆ.
ಇಂದಿರಾ ಆಹಾರ ಕಿಟ್ ಯೋಜನೆಯಡಿ ಪ್ರತಿ ಕಿಟ್‌ನಲ್ಲಿ 1 ಕೆಜಿ ತೊಗರಿ ಬೇಳೆ, 1 ಕೆಜಿ ಹೆಸರು ಕಾಳು, 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಉಪ್ಪು ಮತ್ತು 1 ಕೆಜಿ ಸಕ್ಕರೆ ಸೇರಿರುತ್ತವೆ. ಈ ಕಿಟ್‌ಗಳ ವಾರ್ಷಿಕ ವಿತರಣೆಗೆ ಸುಮಾರು 6,119.52 ಕೋಟಿ ರೂಪಾಯಿಗಳ ಅಂದಾಜು ವೆಚ್ಚವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋಧಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶೀಘ್ರದೇ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ.ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೂ ಮುನ್ನ ಅನ್ನಭಾಗ್ಯ ಯೋಜನೆಯಡಿ 10ಕೆಜಿ ಉಚಿತ ಅಕ್ಕಿ ವಿತರಣೆಯ ಮಾಡುವ ಭರವಸೆಯನ್ನು ನೀಡಿತ್ತು. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಚನೆಯಾದ ಸರ್ಕಾರದಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆ ವೇಳೆ ಸರ್ಕಾರ ಅಕ್ಕಿ ಹಣವನ್ನು ನೇರವಾಗಿ ಜನರ ಖಾತೆಗೆ ಹಾಕುವ ಮೂಲಕ ನೆರವು ನೀಡಿತ್ತು. ಆದರೆ ಈಗ ಈ ಹೊಸ ಕಿಟ್ ವ್ಯವಸ್ಥೆಯು ದೈನಂದಿನ ಆಹಾರ ಅಗತ್ಯಗಳನ್ನು ಹೆಚ್ಚು ಸಮತೋಲನಗೊಳಿಸುವ ಉದ್ದೇಶ ಹೊಂದಿದೆ.
ಈ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಹಾರ ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಅವರು, ಈ ಕಿಟ್‌ಗಳು ಪೌಷ್ಟಿಕತೆಯನ್ನು ಹೆಚ್ಚಿಸುವ ಜೊತೆಗೆ ಪಡಿತರ ಕುಟುಂಬಗಳ ಆರ್ಥಿಕ ಭಾರವನ್ನು ಕಡಿಮೆ ಮಾಡುತ್ತವೆ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇಂದಿರಾ ಆಹಾರ್ ಕಿಟ್ ವಿತರಣೆ ಮಾಡಲು ಕ್ಯಾಬಿನೆಟ್ ನಲ್ಲಿ ಅನುಮೋದನೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆ ಅಡಿ ನೀಡುವ ಇಂದಿರಾ ಆಹಾರ್ ಕಿಟ್ ನಲ್ಲಿ ಪೌಷ್ಟಿಕ ಆಹಾರಗಳ ವಿತರಣೆ ಮಾಡಲು ನಿರ್ಧಾರಿಸಲಾಗಿದೆ. ರಾಜ್ಯ ಸರ್ಕಾರದ 5ಕೆಜಿ ಅಕ್ಕಿ ಬದಲು ಆಹಾರ ಧಾನ್ಯ ವಿತರಣೆ, ಅಂದರೆ ತೊಗರಿಬೇಳೆ, ಎಣ್ಣೆ, ಉಪ್ಪು, ಸಕ್ಕರೆ ವಿತರಿಸಲು ತೀರ್ಮಾನ ಮಾಡಲಾಗಿದೆ. ಅನ್ನ ಭಾಗ್ಯ ಯೋಜನೆ ಅಕ್ಕಿ ಕಳ್ಳ ಸಾಗಾಟವಾಗುತ್ತಿದ್ದ ಕಾರಣಕ್ಕೂ ಕಡಿವಾಣ ಹಾಕಲು ನಿರ್ಧಾರ ಮಾಡಿದೆ. ಒಬ್ಬರು ಇಬ್ಬರು ಮಾತ್ರ ಪಡಿತರದಾರರು ಇದ್ದರೆ ಅರ್ಧ ಕೆಜಿ ಇರುವ ಕಿಟ್ ವಿತರಣೆ ಮಾಡಲಾಗುತ್ತದೆ. ಮೂರು ನಾಲ್ಕು ಮಂದಿ ಇದ್ದರೆ ಒಂದೊಂದು ಕೆಜಿವುಳ್ಳ ಕಿಟ್ ಮಾಡಲಾಗುತ್ತದೆ. ಐದಕ್ಕಿಂತ ಹೆಚ್ಚು ಮಂದಿ ಇದ್ದರೆ ಒಂದೂವರೆ ಕೆಜಿವುಳ್ಳ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. 1,26,15,815 ಪಡಿತರ ಕಾರ್ಡ್‌ಗಳು ಇವೆ, ಈ ಯೋಜನೆಯಿಂದ 4,48,62,192 ಮಂದಿಗೆ ಅನುಕೂಲ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
5KG ಅಕ್ಕಿ ಬದಲು, ಇನ್ಮೇಲೆ ಸಿಗುತ್ತೆ ಇಂದಿರಾ ಆಹಾರ ಕಿಟ್
