ಮಂಗಳೂರು: ತುಳುನಾಡಿನಲ್ಲಿ ದೈವಾರಾಧಕರು ಹಾಗೂ ಕಾಂತಾರ ಚಾಪ್ಟರ್ 1 ಸಿನಿಮಾದ ನಡುವಿನ ಫೈಟ್ ತಾರಕಕ್ಕೇರಿದೆ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ದೈವಾರಾಧನೆ ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು ದೈವಸ್ಥಾನದ ಮೆಟ್ಟಿಲೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಗಳೂರಿನ ಬಜಪೆ ಸಮೀಪ ಪೆರಾರ ಬ್ರಹ್ಮ ಬಲವಂಡಿ, ಪಿಲಿಚಂಡಿ ದೈವಸ್ಥಾನದಲ್ಲಿ ದೈವನರ್ತಕರು ಹಾಗೂ ದೈವಾರಾಧಕರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾ ಹಾಗೂ ದೈವಾರಾಧನೆಯ ಅಪಹಾಸ್ಯದ ವಿರುದ್ಧ ದೈವಸ್ಥಾನದ ಮೆಟ್ಟಿಲೇರಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ, ಪಿಲಿ ದೈವದ ಆವೇಶ ಸೇರಿದಂತೆ ದೈವ ನರ್ತನದ ಬಳಕೆ ಮಾಡಲಾಗಿತ್ತು. ಸಿನಿಮಾ ಬಿಡುಗಡೆ ಬೆನ್ನಲ್ಲೇ ಥಿಯೇಟರ್ ಸೇರಿದಂತೆ ಅನೇಕ ಕಡೆ ಹಲವರು ದೈವಾರಾಧನೆಯ ಅನುಕರಣೆ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಯೂ ಜೋರಾಗಿದೆ. ಇನ್ನು ಕೆಲವರು ಮೈಮೇಲೆ ದೈವ ಬಂದ ರೀತಿಯಲ್ಲಿ ವಿಕೃತಿ ಮೆರೆದಿದ್ದರು. ಇದೆಲ್ಲವನ್ನು ಖಂಡಿಸಿ ದೈವಾರಾಧಕರು ಇಂದು ದೈವಕ್ಷೇತ್ರದಲ್ಲೇ ಕಾಂತಾರ ಸಿನಿಮಾ ಮತ್ತು ದೈವಾರಾಧನೆಯ ಅಪಹಾಸ್ಯ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.