Ad image

ಅಧಿಕಾರ ಹಂಚಿಕೆ ಸ್ಪಷ್ಟತೆ ಬಗ್ಗೆ ದಾಳ ಉರುಳಿಸಿದ ಸಾಹುಕಾರ್

Team SanjeMugilu
1 Min Read

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ, ಅದರಲ್ಲೂ ಕಾಂಗ್ರೆಸ್​​​ನಲ್ಲಿ  ನವೆಂಬರ್ ಕ್ರಾಂತಿಗೆ ವೇದಿಕೆ ತೆರೆ ಮರೆಯಲ್ಲಿ ಸಿದ್ದವಾದಂತೆ ಕಾಣುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಕ್ರಾಂತಿಯ ಕಹಳೆ ಪೆಟ್ಟಿಗೆ ಸೇರಿಕೊಂಡಿತ್ತು. ಆದರೆ ಪೆಟ್ಟಿಗೆಯಿಂದ ಕಹಳೆ ಹೊರಗೆ ತೆಗೆದು ಸದ್ದು ಮಾಡುವ ಸಿದ್ದತೆ ಆರಂಭಿಸಿದ್ದು ಸಚಿವ ಸತೀಶ್ ಜಾರಕಿಹೊಳಿ. ಸರ್ಕಾರ ರಚನೆಯಾದ ದಿನದಿಂದಲೂ ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ನಲ್ಲಿಯೇ ಗೊಂದಲಗಳಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಸೂತ್ರ ಇದೆಯೋ ಇಲ್ಲವೋ ಎಂಬ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಇಲ್ಲ. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಇದೀಗ ಹೈಕಮಾಂಡ್ ನಾಯಕರನ್ನು ಒತ್ತಾಯ ಮಾಡಿದ್ದಾರೆ. ಪವರ್ ಶೇರಿಂಗ್ ಬಗ್ಗೆ ಹೈಕಮಾಂಡ್ ಸ್ಪಷ್ಟತೆ ಕೊಟ್ಟು ಗೊಂದಲಗಳಿಗೆ ಬ್ರೇಕ್ ಹಾಕಲಿ ಎಂದಿದ್ದಾರೆ. ಸತೀಶ್ ಮಾತಿಗೆ ಗೃಹ ಸಚಿವ ಪರಮೇಶ್ವರ್ ಕೂಡ ದನಿಗೂಡಿಸಿದ್ದಾರೆ.

ಏಕಾಏಕಿ ಶುರುವಾದ ಒತ್ತಡ ಇದಲ್ಲ. ಬದಲಿಗೆ ನಾಯಕತ್ವ ಬದಲಾವಣೆಯ ಮೊಳಕೆಯ‌ನ್ನು ಬುಡದಲ್ಲೇ ಚಿವುಟಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಾಡುವ ತಂತ್ರಗಾರಿಕೆ ಇದು ಎನ್ನಲಾಗುತ್ತಿದೆ. ಸದ್ಯ ಸಿಎಂ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಡಿಕೆ ಶಿವಕುಮಾರ್ ತಮ್ಮ ಬತ್ತಳಿಕೆಯಲ್ಲಿ ಯಾವ ಬಾಣ ಇದೆ ಎಂಬ ಗುಟ್ಟು ಬಿಟ್ಟುಕೊಡುತ್ತಿಲ್ಲ. ನವೆಂಬರ್ ಹತ್ತಿರ ಬರುತ್ತಿದ್ದರೂ ಡಿಕೆಶಿ ದಮ್ಮು ಕಟ್ಟಿಕೊಂಡು ಕೂತಿದ್ದಾರೆ. ಇದರ ಆಳ ಅಗಲ ಅರ್ಥ ಮಾಡಿಕೊಳ್ಳಲು ದಾಳ ಉರುಳಿಸಿರುವ ಅಹಿಂದ ನಾಯಕರು ಚೆಂಡು ತೆಗೆದು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ‌. ಅಧಿಕಾರ ಹಂಚಿಕೆ ಇದೆಯೋ ಇಲ್ಲೋ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಲಿ ಎಂಬುದು ತಂತ್ರಗಾರಿಕೆಯ ಭಾಗ ಎನ್ನಲಾಗುತ್ತಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಯಾವುದೇ ಉತ್ತರ ಕೊಡದೇ ಮೌನಕ್ಕೆ ಶರಣಾಗಿದ್ದಾರೆ.

ಸದ್ಯ ಮೇಲ್ನೋಟಕ್ಕೆ ರಾಜ್ಯ ರಾಜಕೀಯದ ಮೇಲೆ ಗಮನ ಹರಿಸಿದವರಿಗೆ ಯಾವುದೇ ಬೇರೆ ಸ್ಫೋಟಕ ತಿರುವು ಪಡೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಆದರೆ ಸತೀಶ್ ಜಾರಕಿಹೊಳಿಯ ಒತ್ತಡ ಸುನಾಮಿಯೊಂದರ ಮುನ್ಸೂಚನೆಯಾ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

Share This Article