ಬೆಳಗಾವಿ: ನಮ್ಮ ಸಮಿತಿ ಸದಸ್ಯರ ಸಂಖ್ಯೆ ಒಂಬತ್ತಾಗುತ್ತೋ? ಹನ್ನೊಂದಾಗುತ್ತೋ? ಹದಿನೈದಾಗುತ್ತೋ ನೋಡೋಣ. ಮೇಲೆ ಕುಳಿತವನು ಆಟ ಆಡಿಸ್ತಾನೆ. ನಾವೆಲ್ಲ ಗೊಂಬೆಗಳು, ಹೇಳಿದಂತೆ ಆಟ ಆಡುತ್ತೇವೆ ಎಂದು ಮಾಜಿ ಡಿಸಿಎಂ, ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆ ದಿನದಿಂದ ದಿನಕ್ಕೂ ರೋಚಕತೆ ಪಡೆಯುತ್ತಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡದಲ್ಲಿ ಈಗಾಗಲೇ ಕತ್ತಿ ಜಾರಕಿಹೊಳಿ, ಹಾಗೂ ಹುಕ್ಕೇರಿ, ಜೊಲ್ಲೆ ಮನೆತನಗಳಿದ್ದು ಈಗ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಅಥಣಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಾಗವಾಡ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ರಾಜು ಕಾಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಇಬ್ಬರೂ ಏಕಾಕಾಲಕ್ಕೆ ಆಗಮಿಸಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾವೂ ಯಾರ ಬಣದಲ್ಲೂ ಇಲ್ಲ ಎನ್ನುವ ಮೂಲಕ ಜಾರಕಿಹೊಳಿ ಸಹೋದರರಿಗೆ ಶಾಸಕ ಕಾಗೆ ಶಾಕ್ ಕೊಟ್ಟಿದ್ದಾರೆ. ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಅಖಾಡಕ್ಕೆ ಶಾಸಕ ರಾಜು ಕಾಗೆ ಎಂಟ್ರಿಯಾಗುತ್ತಿದ್ದು ರಾಜು ಕಾಗೆಯವರನ್ನು ಗೆಲ್ಲಿಸುವ ಹೊಣೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹೊತ್ತಿದ್ದಾರೆ. ಕಾಗೆ ವಿರುದ್ಧ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಕಣಕ್ಕಿಳಿದಿದ್ದು ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಟಳ್ಳಿ ಸ್ಪರ್ಧೆ ಮಾಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಲಕ್ಷ್ಮಣ ಸವದಿ, ನಾನು ಹಾಗೂ ರಾಜು ಕಾಗೆ ಒಂದೇ ಸಮಿತಿಯಲ್ಲಿದ್ದು ನಮ್ಮ ಸಮಿತಿಗೆ ಬರುವ ಎಲ್ಲರಿಗೂ ಸ್ವಾಗತ ಮಾಡುತ್ತೇವೆ. ಹೋಗುವವರಿಗೂ ಧನ್ಯವಾದ ಹೇಳಿ ಕಳಿಸುತ್ತೇವೆ ಎಂದರು.
ನಮ್ಮ ಜೊತೆ ಯಾರೂ ಇಲ್ಲ ಎನ್ನುತ್ತೀರಿ. ಆದರೆ ಬಣ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ, ಸಸಿ ನೆಡುವ ವೇಳೆ ಒಂದೇ ಇರುತ್ತೆ. ಬಳಿಕ ಎಲೆ, ಕಾಯಿ, ಹೂವು ಎಲ್ಲವೂ ಬರುತ್ತದೆ ಎನ್ನುವ ಮೂಲಕ ಮಾರ್ಮಿಕವಾಗಿ ತಮ್ಮ ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ ಎಂಬ ಸುಳಿವು ನೀಡಿದರು.
