ಬೆಂಗಳೂರು: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 6 ಮಕ್ಕಳು ಸಾವನ್ನಪ್ಪಿದ ಬಳಿಕ, ಸಿರಪ್ ಬಳಕೆಗೆ ಆರೋಗ್ಯ ಇಲಾಖೆ ಗೈಡ್ಲೈನ್ಸ್ ಬಿಡುಗಡೆ ಮಾಡಿತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಹೆರಿಗೆ ಆಸ್ಪತ್ರೆಗಳಲ್ಲಿ ವೈದ್ಯರು, ಗರ್ಭಿಣಿಯರು ಹಾಗೂ ಬಾಣಂತಿಯರ ಬಗ್ಗೆ ಎಚ್ಚರಿಕೆ ವಹಿಸುತ್ತಾ ಇದ್ದಾರೆ.
ಹೊರ ರಾಜ್ಯಗಳಲ್ಲಿ ಸಿರಪ್ನಿಂದ ಮಕ್ಕಳು ಸಾವನ್ನಪ್ಪಿದ ಪ್ರಕರಣದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಮಾರ್ಗಸೂಚಿ ಬಿಡುಗಡೆ ಆಗಿದೆ. ಕರ್ನಾಟಕದ ಆರೋಗ್ಯ ಇಲಾಖೆಯಿಂದ ಕೂಡ ಮಾರ್ಗಸೂಚಿ ಬಿಡುಗಡೆ ಆಗಿತ್ತು. ಈಗ ವೈದ್ಯಕೀಯ ಶಿಕ್ಷಣ ಇಲಾಖೆಯೂ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳು ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಿದೆ. ಅದರಲ್ಲೂ ಹೆರಿಗೆ ಆಸ್ಪತ್ರೆಗಳು ಗರ್ಭಿಣಿಯರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಸೂಚಿಸಿದ್ದು, ವಾಣಿ ವಿಲಾಸ ಆಸ್ಪತ್ರೆಗೆ ಬರುವ ಬಾಣಂತಿಯರು ಮತ್ತು ಪೋಷಕರಿಗೆ ಸಿರಪ್ ಬಳಕೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದ್ದಾರೆ.
ಸಿರಪ್ ಬಳಕೆಗೆ ಮುಂಜಾಗ್ರತಾ ಕ್ರಮವೇನು?
* ಆರು ತಿಂಗಳ ಮಗುವಿಗೆ ಕೆಮ್ಮಿದ್ದರೆ ಎದೆ ಹಾಲುಣಿಸಬೇಕು. ಸಿರಪ್ ನೀಡಬಾರದು.
* ಮಗುವಿಗೆ ನ್ಯುಮೋನಿಯಾದಂತಹ ಲಕ್ಷಣ ಕಂಡುಬಂದಾಗ ಸಿರಪ್ ಬಳಕೆ ಮಾಡಬಾರದು. ವೈದ್ಯರ ಸಲಹೆ ಪಡೆಯಬೇಕು.
* ಮಗು ಅನಾರೋಗ್ಯ ತಪ್ಪಿದಾಗ ವೈದ್ಯರನ್ನ ಭೇಟಿ ಮಾಡಬೇಕು.
* ಮಗುವಿಗೆ ಕೆಮ್ಮು ಜಾಸ್ತಿ ಆದಾಗ ವೈದ್ಯರ ಸಲಹೆ ಮೇರೆಗೆ ಔಷಧಿ ಕೊಡಬೇಕು.
* ಯಾವುದೇ ಸಿರಪನ್ನು ದೀರ್ಘಕಾಲದವರೆಗೂ ಬಳಸಬಾರದು.
ಒಟ್ಟಾರೆ ಸಿರಪ್ ಬಗ್ಗೆ ಎಚ್ಚರಿಕೆಯ ಅಗತ್ಯವಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ವೈದ್ಯರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಮಗಳನ್ನ ಪಾಲಿಸಬೇಕಾಗಿದೆ.