ಬೆಂಗಳೂರು, ಅಕ್ಟೋಬರ್ 13: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರ್ನಾಲ್ಕು ಬಾರಿ ಮದ್ಯದ ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ, ಕಳೆದ ಆರು ತಿಂಗಳಿನಿಂದ ಮಾರಾಟದ ಮೇಲೆ ಹೊಡೆತ ಬಿದ್ದಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ವರ್ಷ ವ್ಯಾಪಾರ ಕುಸಿದಿದೆ. ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಡೇಟಾ ಪ್ರಕಾರ, ರಾಜ್ಯದಲ್ಲಿ ಮದ್ಯ ಮಾರಾಟ ಚೇತರಿಕೆ ಕಂಡಿಲ್ಲ. 2023, 2024ಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣ ಎಂದು ಮದ್ಯ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
2023ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 352.83 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದರೆ, 2024ರ ಅದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್ಗೆ ಇಳಿಕೆಯಾಗಿತ್ತು. 2025 ರಲ್ಲಿ 342.93 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ 2.83 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆಯಾಗಿದೆ. ಈ ಬಗ್ಗೆ ಮದ್ಯ ಮಾರಾಟಗಾರರು ಪ್ರತಿಕ್ರಿಯಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ 15 ರಿಂದ 20 ರಷ್ಟು ಮದ್ಯ ಮಾರಾಟ ಕಡಿಮೆ ಆಗಿದೆ ಎಂದಿದ್ದಾರೆ.
2024ರ ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ 242.73 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು.ಆದರೆ 2025ರ ಇದೇ ಅವಧಿಯಲ್ಲಿ 195.27 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 47.46 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆ ಆಗಿದ್ದು, ಶೇ 19.55ರಷ್ಟು ಕಡಿಮೆ ಆಗಿದೆ.
ಬಿಯರ್ ಮಾರಟ ಪ್ರತಿ ತಿಂಗಳು ಕುಸಿತ
ಪ್ರತಿ ತಿಂಗಳಿನಲ್ಲೂ ಬಿಯರ್ ಮಾರಾಟದಲ್ಲಿ ಕಡಿಮೆ ಆಗುತ್ತಲೇ ಇದೆ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಾಡಿದ ಬಿಯರ್ ಪ್ರಿಯರು, ಬಿಯರ್ ಮೇಲೆ ದರ ಏರಿಕೆ ಮಾಡಿರುವುದರಿಂದ ಮೂರು ಬಿಯರ್ ಕುಡಿಯುತ್ತಿದ ನಾವು, ನಮ್ಮ ಸ್ನೇಹಿತರು ಇದೀಗ ಒಂದು ಬಿಯರ್ ಕುಡಿಯುವಂತೆ ಆಗಿದೆ ಎಂದಿದ್ದಾರೆ. ಅಲ್ಲದೆ, ಈಗ 100 ರುಪಾಯಿಗೆ ಒಂದು ಬಿಯರ್ ನೀಡಬೇಕು ಎಂದು ಮದ್ಯಪ್ರಿಯ ಉಪೇಂದ್ರ ಎಂಬವರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ರಾಜ್ಯ ಸರ್ಕಾರ ಬಿಯರ್ ಮತ್ತು ಐಎಂಎಲ್ ಮೇಲೆ ಪದೇಪದೇ ದರ ಏರಿಕೆ ಮಾಡಿರುವುದರಿಂದ, ವ್ಯಾಪಾರ ಕಡಿಮೆ ಆಗಿದೆ. ಆದಾಗ್ಯೂ ಸುಂಕ, ದರ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯ ಬರುತ್ತಿದೆ.