ಬೆಂಗಳೂರು: ರಾಜ್ಯಾದ್ಯಂತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕೊನೆಯ ಹಂತಕ್ಕೆ ಬಂದಿದೆ. ಆದ್ರೆ ಬೆಂಗಳೂರಲ್ಲಿ ಮಾತ್ರ ಜಾತಿ ಗಣತಿ ಸಮೀಕ್ಷೆ ನಿಧಾನಗತಿಯಲ್ಲಿ ಸಾಗಿದೆಯಂತೆ. ಹೀಗಾಗಿ ರಾತ್ರಿಯಲ್ಲೂ ಸಮೀಕ್ಷೆ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ ಎನ್ನಲಾಗ್ತಿದೆ. ಇಂದು ವಿಶೇಷ ಅಭಿಯಾನದ ಮೂಲಕ ಬೆಂಗಳೂರಲ್ಲಿ ಸಮೀಕ್ಷೆ ನಡೆಯಲಿದೆ. ರಾತ್ರಿಯಲ್ಲಿ ಗಣತಿದಾರರು ಮನೆ, ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.
ರಾತ್ರಿ ವೇಳೆಯೂ ಸಮೀಕ್ಷೆ ಸೂಚನೆ
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರದಲ್ಲಿ ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಹಿನ್ನಲೆ ಇಂದು ರಾತ್ರಿಯೂ ಸಮೀಕ್ಷೆ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಸಂಜೆ 6 ಗಂಟೆ ಬಳಿಕ ಸಮೀಕ್ಷೆ ನಿಲ್ಲಿಸಲಾಗ್ತಿತ್ತು. ಆದ್ರೆ ಇಂದು ರಾತ್ರಿ 9 ಗಂಟೆವರೆಗೂ ಸಮೀಕ್ಷೆ ನಡೆಸಲು ಗಣತೀದಾರರಿಗೆ ಸೂಚಿಸಲಾಗಿದೆ.
ರಾತ್ರಿ 9 ಗಂಟೆವರೆಗೂ ಸಮೀಕ್ಷೆ
ರಾತ್ರಿ 6 ರಿಂದ 9 ಗಂಟೆಗಳವರೆಗೂ ವಿಶೇಷ ಅಭಿಯಾನದ ಮೂಲಕ ಬೆಂಗಳೂರಲ್ಲಿ ಸಮೀಕ್ಷೆ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಸಮೀಕ್ಷೆ ವೇಗ ಹೆಚ್ಚಿಸುವಂತೆ ಮುಖ್ಯ ಕಾರ್ಯದರ್ಶಿಯಿಂದ ಜಿಬಿಎಗೆ ಸೂಚನೆ ಬಂದಿದೆ.
ವಿಶೇಷ ಅಭಿಯಾನ
ಇದೀಗ ಸಿಎಸ್ ಪತ್ರದ ಬೆನ್ನಲ್ಲೇ ಎಚ್ಚೆತ್ತ ಜಿಬಿಎ ಮುಖ್ಯ ಆಯುಕ್ತರು, ಸಂಜೆ ವಿಶೇಷ ಅಭಿಯಾನದ ಮೂಲಕ ಸಮೀಕ್ಷೆಗೆ ವೇಗ ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಸಂಜೆ 6 ರಿಂದ ರಾತ್ರಿ 9 ರ ವರೆಗೂ ವಿಶೇಷ ಅಭಿಯಾನದ ಮೂಲಕ ಸಮೀಕ್ಷೆ ನಡೆಯಲಿದೆ.
ಹಗಲಿನ ಸಮಯದಲ್ಲಿ ಲಭ್ಯವಿಲ್ಲದವರ ಸಮೀಕ್ಷೆ
ಸಾಮಾನ್ಯವಾಗಿ ಬೆಂಗಳೂರಲ್ಲಿ ಕೆಲಸಕ್ಕೆ ಹೋಗುವವರೇ ಹೆಚ್ಚು. ಬೆಳಗಿನ ಸಮಯದಲ್ಲಿ ಅನೇಕರು ಮನೆಗೆ ಬೀಗ ಬಿದ್ದಿರುತ್ತೆ. ಹಗಲಿನ ಸಮಯದಲ್ಲಿ ಲಭ್ಯವಿಲ್ಲದವರ ಸಮೀಕ್ಷೆ ಪೂರ್ಣಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ರಾತ್ರಿ ಮನೆಗಳ ಬಾಗಿಲಿಗೆ ಬರುವ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಬೆಂಗಳೂರಿನ ಸಾರ್ವಜನಿಕರು ಸಹಕರಿಸುವಂತೆ ಜಿಬಿಎ ಮನವಿ ಮಾಡಿದೆ.
ಜಾತಿ ಗಣತಿ ಸಮೀಕ್ಷೆ ಚುರುಕುಗೊಳಿಸಿದ ಜಿಬಿಎ
