ಬೆಂಗಳೂರು : ಕಳೆದ ತಿಂಗಳು ಸರ್ಕಾರದ ವಿರುದ್ಧ 80% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರು ಇಂದು ಕೂಡ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಡೆಡ್ಲೈನ್ ನೀಡಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಮಾತಾಡಿದ್ದು, ಎರಡು ವರ್ಷದಿಂದ ಈ ಸರ್ಕಾರದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ವಿ. ಐದಾರು ಬಾರಿ ಸಿಎಂ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದ್ರೂ ಯಾವುದೇ ಪ್ರಯೋಜವಾಗಿಲ್ಲ. ನಮಗೆ ರಾಜ್ಯ ಸರ್ಕಾರದಿಂದ 33 ಸಾವಿರ ಕೋಟಿ ಬಾಕಿ ಇದೆ. ಬಿಲ್ ಕ್ಲಿಯರ್ ಮಾಡದಿದ್ರೆ, ಭ್ರಷ್ಟಾಚಾರದ ರಿಪೋರ್ಟ್ ಕಾರ್ಡ್ ರಿಲೀಸ್ ಮಾಡ್ತೀವಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಸಚಿವ ಜಮೀರ್ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ.
ಡೆಡ್ ಲೈನ್ ಕೊಟ್ಟ ಗುತ್ತಿಗೆದಾರರು
ಗುತ್ತಿಗೆಯಲ್ಲಿ ಪ್ಯಾಕೇಜ್ ಸಿಸ್ಟಮ್ ಕೈ ಬಿಡಬೇಕು ಎಂದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಡಿಸೆಂಬರ್ ವರೆಗೂ ಸರ್ಕಾರಕ್ಕೆ ಡೆಡ್ ಲೈನ್ ನೀಡೋದಾಗಿ ಹೇಳಿದ್ದಾರೆ. ನವೆಂಬರ್ ಒಳಗೆ ಎಲ್ಲಾ ಬಿಲ್ ಬಾಕಿ ಬಿಡುಗಡೆಯಾಗಿ ಪಾವತಿಯಾಗಬೇಕು. ಬಾಕಿ ಹಣ ಬಿಡುಗಡೆ ಮಾಡದಿದ್ರೆ ರಾಜ್ಯಪಾಲರು ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾಗೂ ದೂರು ನೀಡುವ ಎಚ್ಚರಿಕೆ ನೀಡಿದ್ದಾರೆ.
‘ಭ್ರಷ್ಟಾಚಾರದ ರಿಪೋರ್ಟ್ ಕಾರ್ಡ್ ಬಿಡುಗಡೆ’
ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಗುತ್ತಿಗೆದಾರರ ಸಂಘ, ಈ ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಾಚಾರ ನಡೀತಿದೆ ಎಂದಿದ್ದಾರೆ. ಡಿಸೆಂಬರ್ ಒಳಗೆ ಬಾಕಿ ಬಿಲ್ ಕ್ಲಿಯರ್ ಆಗಿಲ್ಲ ಅಂದ್ರೆ ಈ ಸರ್ಕಾರದ ಭ್ರಷ್ಟಾಚಾರದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡ್ತೇವೆ. ಎಷ್ಟು ಕಮಿಷನ್ ತಗೋತಿದ್ದಾರೆ ಅನ್ನೋದನ್ನೆಲ್ಲಾ ಡಿಸೆಂಬರ್ ಬಳಿಕ ಹೇಳ್ತೇವೆ ಎಂದು ಗುತ್ತಿಗೆದಾರರು ಸುದ್ದಿಗೋಷ್ಠಿಯಲ್ಲೇ ವಾರ್ನಿಂಗ್ ಕೊಟ್ಟಿದ್ದಾರೆ.
ನಮ್ಮ ಸಹನೆಯ ಕಟ್ಟೆ ಹೊಡೆದು ಹೋಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕರ್ನಾಟಕದಲ್ಲಿ ಹೊರ ರಾಜ್ಯದ ಗುತ್ತಿಗೆದಾರರು ತುಂಬಿಕೊಂಡು ಬಿಟ್ಟಿದ್ದಾರೆ. ನಮ್ಮವರು ಹೊರ ರಾಜ್ಯದ ಗುತ್ತಿಗೆದಾರರಿಗೆ ಪೂರಕವಾದ ವಾತಾವರಣ ನಿರ್ಮಿಸ್ತಿದ್ದಾರೆ ಎಂದಿದ್ದಾರೆ.
ಜಮೀರ್ ಖಾನ್ ಮೇಲೆ ಗಂಭೀರ ಆರೋಪ
ಸಚಿವ ಜಮೀರ್ ಅಹಮ್ಮದ್ ಖಾನ್ ಮೇಲೆ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದು, ಭ್ರಷ್ಟ ನಿವೃತ್ತ ಇಂಜಿನಿಯರ್ರನ್ನು ಕರ್ಕೊಂಡು ಬಂದು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಬಾಲರಾಜ್ ಎಂಬುವರನ್ನು ನೇಮಿಸಿ ಗೋಲ್ಮಾಲ್ ಮಾಡ್ತಿದ್ದಾರೆ. ಆತನ ಮೇಲೆ ಭ್ರಷ್ಟಾಚಾರ ಆರೋಪ ಇದ್ದು, ಜಮೀರ್ ಅಹಮ್ಮದ್ ಅವರ ವಸತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೀತಿದೆ ಎಂದು ಆರೋಪ ಮಾಡಿದ್ದಾರೆ.
ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಬಾಕಿ? :
* ನೀರಾವರಿ ಇಲಾಖೆ 12000 ಕೋಟಿ
* ಪಿಆರ್ ಡಿ ಇಲಾಖೆ 3600 ಕೋಟಿ
* ಸಣ್ಣ ನೀರಾವರಿ ಇಲಾಖೆ 3200 ಕೋಟಿ
* ನಗರಾಭಿವೃದ್ಧಿ ಇಲಾಖೆ 2000 ಕೋಟಿ
* ಮಹಾತ್ಮ ಗಾಂಧಿ ಯೋಜನೆ 1600 ಕೋಟಿ
* ಹೌಸಿಂಗ್ ಇಲಾಖೆ 1200 ಕೋಟಿ
* ಕಾರ್ಮಿಕ ಇಲಾಖೆ 800 ಕೋಟಿ
* ಒಟ್ಟು ಬಾಕಿ 33000 ಕೋಟಿ
‘ಬಿಲ್ ಕ್ಲಿಯರ್ ಮಾಡದಿದ್ರೆ ಭ್ರಷ್ಟಾಚಾರದ ರಿಪೋರ್ಟ್ ಕಾರ್ಡ್ ರಿಲೀಸ್’
