ಕಲಬುರಗಿ : ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ಪ್ರಕರಣದ ತನಿಖೆಯನ್ನ ಎಸ್ಐಟಿ ಚುರುಕುಗೊಳಿಸಿದೆ. ಆಳಂದ ಹಳ್ಳದ ಬಳಿ ಸುಟ್ಟು ಬಿದ್ದಿರುವ ಹಲವು ದಾಖಲೆಗಳ ಪರಿಶೀಲನೆ ನಡೆಸಿರುವ SIT ಅಧಿಕಾರಿಗಳು, ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಸುಭಾಷ್ ಗುತ್ತೆದಾರ್ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆಯಲಾಗಿದೆ.
ಸಿಸಿಟಿವಿ ಡಿವಿಆರ್ ವಶಕ್ಕೆ
ಆಳಂದ ವಿಧಾನಸಭಾ ಕ್ಷೇತ್ರದ ಮತಗಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತೀವ್ರ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಮಾಜಿ ಶಾಸಕ ಸುಭಾಷ್ ಗುತ್ತೆದಾರ್ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಅನ್ನು ವಶಕ್ಕೆ ಪಡೆದಿದ್ದಾರೆ. ಆಳಂದ ಪಟ್ಟಣದ ಗುತ್ತೆದಾರ್ ಮನೆಯ ಮುಂಭಾಗದಲ್ಲಿ ದಾಖಲಾತಿ ಸುಟ್ಟಿರುವ ಹಿನ್ನೆಲೆ ರೇವಣಸಿದ್ದೇಶ್ವರ ಕಾಲೋನಿಯಲ್ಲಿನ ಮನೆಯಲ್ಲಿನ ಡಿವಿಆರ್ ವಶಕ್ಕೆ ಪಡೆಯಲಾಗಿದೆ.
ದಾಖಲೆ ಬೆಂಕಿ ಇಟ್ಟ ದೃಶ್ಯ ಸೆರೆಯಾಗಿದ್ಯಾ?
ಸಿಸಿಟಿವಿಯ ಡಿವಿಆರ್ ಜೊತೆಗೆ ಕೆಲ ಮಹತ್ವದ ದಾಖಲಾತಿ ವಶ ಪಡೆದ ಎಸ್ ಐ ಟಿ, ಬೆಂಕಿ ಇಟ್ಟ ದೃಶ್ಯ ಸೆರೆಯಾಗಿದ್ಯಾ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದೆ. ಆಳಂದ ಪಟ್ಟಣದ ಮನೆಯ ಮುಂಭಾಗದಲ್ಲಿ ಸೋಕೋ ಟೀಮ್ ನಿಂದ ಸ್ಥಳ ಮಹಜರು ಕಾರ್ಯಕ ಕೂಡ ನಡೆದಿದೆ.
‘ನಾನು ಮತಗಳ್ಳತನ ಮಾಡಿಲ್ಲ’
ಕಲ್ಬುರ್ಗಿಯಲ್ಲಿ ಮಾತಾಡಿ ಆಳಂದ್ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ನಾನು ಯಾವುದೇ ರೀತಿಯ ಮತ ಚೋರಿ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ. ಬಿ ಆರ್ ಪಾಟೀಲ್ ಮಾತು ಕೇಳಿ ಎಸ್ಐಟಿ ತನಿಖೆಗೆ ಸರ್ಕಾರ ವಹಿಸಿದೆ. ಎಸ್ಐಟಿ ನನ್ನ ಮನೆಯಲ್ಲಿ ಏನು ಬೇಕಾದ್ರೂ ಚೆಕ್ ಮಾಡಲಿ. ನನ್ನನ್ನು ಬೇಕಾದ್ರೆ ಅರೆಸ್ಟ್ ಸಹ ಮಾಡಲಿ. ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ರೀತಿ ತನಿಖೆ ಎದುರಿಸಲು ಸಿದ್ಧನಾಗಿದ್ದೇನೆ ಎಂದಿದ್ದಾರೆ.
‘ಸಾಕ್ಷ ನಾಶಪಡಿಸಲು ಯತ್ನಿಸಿಲ್ಲ’
ನನ್ನ ಮನೆಯ ಮೇಲಿನ SIT ದಾಳಿ ರಾಜಕೀಯ ಪ್ರೇರಿತ ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಆರೋಪ ಮಾಡಿದ್ದಾರೆ. ನಾನು ಯಾವುದೇ ರೀತಿಯ ಸಾಕ್ಷ ನಾಶಪಡಿಸಲು ಯತ್ನಿಸಿಲ್ಲ ಎಂದಿದ್ದಾರೆ.
ಮನೆಯ ಹೊರಗಡೆ ಕೆಲ ದಾಖಲೆ ಸುಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಸುಭಾಷ್ ಗುತ್ತೇದಾರ್, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆ ಕ್ಲೀನ್ ಮಾಡುವುದು ವಾಡಿಕೆ. ಅದರಂತೆ ಕೆಲವು ವೇಸ್ಟ್ ಸಾಮಗ್ರಿಗಳನ್ನ, ಹಳೆಯ ನ್ಯೂಸ್ ಪೇಪರ್ ಸೇರಿದಂತೆ ಉಪಯೋಗಕ್ಕೆ ಬಾರದ ಕಾಗದಗಳನ್ನು ಮನೆ ಕೆಲಸದವರು ಸುಟ್ಟಿದ್ದಾರೆ ಎಂದಿದ್ದಾರೆ.
ರಾಜಕಾರಣಿ ಮನೆಯಲ್ಲಿ ವೋಟರ್ ಲಿಸ್ಟ್ ಇರಲ್ವಾ?
ಇದು ಯಾವುದೇ ರೀತಿಯ ಸಾಕ್ಷಿ ನಾಶ ಪ್ರಯತ್ನ ಅಲ್ಲ. ನಾನು ರಾಜಕಾರಣಿಯಾಗಿದ್ದೇನೆ ನನ್ನ ಮನೆಯಲ್ಲಿ ವೋಟರ್ ಲಿಸ್ಟ್ ಸಿಕ್ಕರೆ ಅದು ದೊಡ್ಡ ವಿಚಾರ ಅಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಸೇರದಂತೆ ಬೇರೆ ಬೇರೆ ಚುನಾವಣೆಗಳು ಇವೆ. ರಾಜಕಾರಣಿ ಮನೆಯಲ್ಲಿ ವೋಟರ್ ಲಿಸ್ಟ್ ಇರುವುದು ಸಾಮಾನ್ಯ ಎಂದು ಗುತ್ತೇದಾರ್ ಹೇಳಿದ್ದಾರೆ.
ಆಳಂದ ಬಿಜೆಪಿ ಮಾಜಿ ಶಾಸಕನ ಮನೆಯಲ್ಲಿ ಸುಟ್ಟ ದಾಖಲೆಗಳು! ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ SIT
