ಬೆಂಗಳೂರು: ನಗರದಲ್ಲಿ ಜನಸಾಮಾನ್ಯರು ಎಲ್ಲಾದರೂ ಹೊರಗಡೆ ಹೋಗಬೇಕಾದರೆ ಮೊದಲಿಗೆ ನೆನಪಾಗುವುದು ಬಿಎಂಟಿಸಿ. ಆದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಅಂದರೆ ಜನರು ಒಂದು ಕ್ಷಣ ಯೋಚಿಸುವಂತಾಗಿದೆ. ಏಕೆಂದರೆ ಉತ್ತಮ ಸಾರಿಗೆ ಸೇವೆಗೆ ಹೆಸರಾಗಿದ್ದ ಬಿಎಂಟಿಸಿ ಬಸ್ಗಳು ಅಮಾಯಕ ಜನರ ಜೀವ ತೆಗೆಯುವ ಯಮಸ್ಬರೂಪಿಗಳಾಗಿ ಮಾರ್ಪಟ್ಟಿವೆ. ಇದೀಗ ನಗರದಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, 9 ವರ್ಷದ ಬಾಲಕಿ ಬಿಎಂಟಿಸಿ ಬಸ್ ಹರಿದು ದಾರುಣ ಅಂತ್ಯ ಕಂಡಿದ್ದಾಳೆ.
ಬೆಂಗಳೂರಿನಲ್ಲಿ ಉತ್ತಮ ಸಾರಿಗೆ ಸೇವೆ ನೀಡುವಲ್ಲಿ ಹೆಸರುವಾಸಿಯಾದ ಬಿಎಂಟಿಸಿ ಸಂಸ್ಥೆಗೆ ಇತ್ತೀಚೆಗೆ ಮೇಲಿಂದ ಮೇಲೆ ಕಪ್ಪು ಚುಕ್ಕೆಗಳು ಬೀಳುತ್ತಿವೆ. ಬೇಜವಾಬ್ದಾರಿತನ ಪ್ರದರ್ಶಿಸಿ ಅಮಾಯಕ ಜನರ ಜೀವದ ಜೊತೆಗೆ ಕೆಲ ಬಿಎಂಟಿಸಿ ಬಸ್ ಚಾಲಕರು ಚೆಲ್ಲಾಟ ಆಡುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಶಾಲೆ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿ ಭುವನ ಮೇಲೆ ಬಿಎಂಟಿಸಿ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಜಾಜಿನಗರ ಮೊದಲನೇ ಬ್ಲಾಕ್ನ ಸಿಗ್ನಲ್ ಬಳಿ ನಡೆದಿದೆ.
ರಾಜಾಜಿನಗರ ಮೊದಲನೇ ಬ್ಲಾಕ್ನಲ್ಲಿರುವ ಪಾಂಚ ಜನ್ಯ ವಿದ್ಯಾಪೀಠ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ಭುವನ ತನ್ನ ಇಬ್ಬರು ಸಹೋದರಿಯರ ಜೊತೆ ಸಿಗ್ನಲ್ ದಾಟುವ ವೇಳೆ ಬಿಎಂಟಿಸಿ ಚಕ್ರಕ್ಕೆ ಸಿಲುಕಿ ನರಳಿ ಕೊನೆಯುಸಿರೆಳಿದ್ದಾಳೆ. ಘಟನೆ ಬಳಿಕ ಕೂಡಲೇ ಸಾರ್ವಜನಿಕರು ಭುವನಳನ್ನ ಸಮೀಪದಲ್ಲೇ ಇದ್ದ ಫೋರ್ಟಿಸ್ ಆಸ್ಪತ್ರೆಗೆ ಕರೆ ತಂದರೂ, ಅಷ್ಟರಲ್ಲಾಗಲೇ ಬಾಲಕಿ ಕೊನೆಯುಸಿರೆಳಿದಿದ್ದಳು.
ಸ್ಥಳಕ್ಕೆ ಬಂದ ಭುವನ ಪೋಷಕರ ಆಕ್ರಂದನ ಕರುಳು ಹಿಂಡುವಂತಿತ್ತು. ಭುವನ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ಮೃತ ಭುವನ ಅವರ ತಂದೆ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ತಾಯಿ ಜೋಳದ ವ್ಯಾಪಾರ ಮಾಡುತ್ತಾ ಮೂರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದರು. ಮಹಾಲಕ್ಷ್ಮಿ ಲೇಔಟ್ ಬಳಿಯ ಬೋವಿ ಪಾಳ್ಯದಲ್ಲಿ ವಾಸ ಇದ್ದರು ಎನ್ನಲಾಗಿದೆ.
ಒಟ್ಟಾರೆ ಬಿಎಂಟಿಸಿ ಬಸ್ಗಳೆಂದರೆ ಇತ್ತೀಚೆಗೆ ಜನ ಗಾಬರಿ ಪಡುವ ಹಾಗೆ ಘಟನೆಗಳು ಒಂದಾದ ಮೇಲೆ ಒಂದರಂತೆ ಮರುಕಳಿಸುತ್ತಿವೆ. ಜನಸಾಮಾನ್ಯರು ಬಸ್ ಹತ್ತುವುದಿರಲಿ ರಸ್ತೆಯಲ್ಲಿ ಓಡಾಟ ಮಾಡುವುದಕ್ಕೂ ಭಯ ಪಡುವ ಹಾಗೆ ಕೆಲ ಬಿಎಂಟಿಸಿ ಬಸ್ ಚಾಲಕರು ಅಪಾಯಕಾರಿ ಚಾಲನೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳುವುದು ಯಾವಾಗ? ಬಿಎಂಟಿಸಿ ಹಿರಿಯ ಅಧಿಕಾರಿಗಳು ಏನೇ ಸಬೂಬು ಹೇಳುತ್ತಿದ್ದರೂ, ಘಟನೆಗಳು ನಡೆಯುತ್ತಲೇ ಇದ್ದು, ಸಾರ್ವಜನಿಕರ ಛೀಮಾರಿಗೆ ಗುರಿಯಾಗಿದೆ.