Ad image

ಕರ್ನಾಟಕ, ಮಹಾರಾಷ್ಟ್ರಕ್ಕೆ 1950.80 ಕೋಟಿ ರಿಲೀಸ್! SDRF 2ನೇ ಕಂತಿನ ಮುಂಗಡ ಬಿಡುಗಡೆ

Team SanjeMugilu
2 Min Read

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ  ನೆರೆ ಪರಿಹಾರ ಘೋಷಣೆಯಾಗಿದೆ. ಇಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಎಸ್‌ಡಿಆರ್‌ಎಫ್‌ ನಿಧಿಯಿಂದ ಮುಂಗಡವಾಗಿ 1950.80 ಕೋಟಿ ರೂಪಾಯಿಗಳನ್ನು ರಿಲೀಸ್ ಮಾಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ  ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, ವಿಪತ್ತುಗಳ ಸಂದರ್ಭದಲ್ಲೂ, ಅದರ ನಂತರವೂ ಜನರ ಜೊತೆಯೇ ಮೋದಿ ಸರ್ಕಾರ ನಿಂತಿದೆ. ಇಂದು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ SDRF ನ ಕೇಂದ್ರ ಪಾಲಿನ ಎರಡನೇ ಕಂತಾಗಿ ರೂ. 1,950.80 ಕೋಟಿಯನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಅಂತ ಹೇಳಿದ್ದಾರೆ.
ಎಸ್‌ಡಿಆರ್‌ಎಫ್‌ ನಿಧಿ ಬಿಡುಗಡೆ
ಈ ವರ್ಷ ಅತಿವೃಷ್ಠಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ತಕ್ಷಣದ ಪರಿಹಾರ ನೆರವು ನೀಡಲು ಈ ನಿಧಿಯನ್ನು ಬಳಸಲಾಗುವುದು. ಈ ವರ್ಷ, ಕೇಂದ್ರ ಸರ್ಕಾರವು SDRF ಅಡಿಯಲ್ಲಿ 27 ರಾಜ್ಯಗಳಿಗೆ ರೂ. 13,603.20 ಕೋಟಿ ಮತ್ತು NDRF ಅಡಿಯಲ್ಲಿ 15 ರಾಜ್ಯಗಳಿಗೆ ರೂ. 2,189.28 ಕೋಟಿಯನ್ನು ಬಿಡುಗಡೆ ಮಾಡಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.

ಕರ್ನಾಟಕಕ್ಕೆ 1950.80 ಕೋಟಿ
2025-26ನೇ ಸಾಲಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ-SDRF ನ ಕೇಂದ್ರ ಪಾಲಿನ ಎರಡನೇ ಕಂತಾಗಿ 1950 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮುಂಗಡ ಬಿಡುಗಡೆಗೆ ಕೇಂದ್ರ ಅನುಮೋದನೆ ನೀಡಿದೆ. ಈ ಮೊತ್ತವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಮೋದಿಸಿದ್ದಾರೆ. ಈ ವರ್ಷದ ನೈಋತ್ಯ ಮಾನ್ಸೂನ್ ಸಮಯದಲ್ಲಿ ಅತಿ ಹೆಚ್ಚು ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ತಕ್ಷಣದ ಪರಿಹಾರ ನೆರವು ನೀಡಲು ಒಟ್ಟು ಮೊತ್ತದಲ್ಲಿ ಕರ್ನಾಟಕಕ್ಕೆ 384 ಕೋಟಿ ರೂಪಾಯಿಗಳಿಗೂ ಹೆಚ್ಚು ಮತ್ತು ಮಹಾರಾಷ್ಟ್ರಕ್ಕೆ ಒಂದು ಸಾವಿರದ 566 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ.
ಹಾನಿಗೊಳಗಾದ ರಾಜ್ಯಗಳಿಗೆ ನೆರವು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟದಿಂದ ಹಾನಿಗೊಳಗಾದ ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ವಿವಿಧ ರಾಜ್ಯಗಳಿಗೆ ಹಣ ಬಿಡುಗಡೆ
ಈ ವರ್ಷ ಕೇಂದ್ರ ಸರ್ಕಾರವು ಈಗಾಗಲೇ SDRF ಅಡಿಯಲ್ಲಿ 27 ರಾಜ್ಯಗಳಿಗೆ 13 ಸಾವಿರದ 603 ಕೋಟಿ ರೂಪಾಯಿಗಳನ್ನು ಮತ್ತು NDRF ಅಡಿಯಲ್ಲಿ 15 ರಾಜ್ಯಗಳಿಗೆ 2 ಸಾವಿರದ 189 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ. ಇದಲ್ಲದೆ, ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ 21 ರಾಜ್ಯಗಳಿಗೆ 4 ಸಾವಿರದ 571 ಕೋಟಿ ರೂಪಾಯಿಗಳನ್ನು ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ ಒಂಬತ್ತು ರಾಜ್ಯಗಳಿಗೆ 372 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅದು ಹೇಳಿದೆ.
ಕೇಂದ್ರದಿಂದ ಅಗತ್ಯ ಸಹಾಯ
ಪ್ರವಾಹ, ಭೂಕುಸಿತ, ಮೇಘಸ್ಫೋಟ ಪೀಡಿತ ರಾಜ್ಯಗಳಿಗೆ ಅಗತ್ಯವಿರುವ ಎನ್‌ಡಿಆರ್‌ಎಫ್ ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ಲಾಜಿಸ್ಟಿಕ್ ಸಹಾಯವನ್ನು ಕೇಂದ್ರ ಸರ್ಕಾರ ಒದಗಿಸಿದೆ ಎಂದು ಸಚಿವಾಲಯ ಮತ್ತಷ್ಟು ತಿಳಿಸಿದೆ. ಈ ವರ್ಷದ ಮಾನ್ಸೂನ್‌ನಲ್ಲಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗರಿಷ್ಠ 199 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅದು ಹೇಳಿದೆ.

Share This Article