ಬೆಂಗಳೂರು: ಇರುಮುಡಿ ಕಟ್ಟಿ ಶಬರಿಮಲೆಗೆ ಕಲ್ಲು ಮುಳ್ಳು ಹೂವಿನ ಹಾದಿ! ಪಂದಳ ಕಂದ, ಧರ್ಮಶಾಸ್ತ, ಕಲಿಯುಗದ ಕಾಮಧೇನು ಎಂದೆಲ್ಲಾ ಅಭಿದಾನ ಪಡೆದ ಶಬರಿಮಲೆ ಅಯ್ಯಪ್ಪನ ಪ್ರಭಾವಳಿಗೆ ಮಾರು ಹೋಗದವರಿಲ್ಲ. ಅಯ್ಯಪ್ಪನ ಪ್ರಭಾವಕ್ಕೆ ಒಳಗಾಗಿ ಭಾರತದ ಮೂರು ಪ್ರತ್ಯೇಕ ಧರ್ಮಗಳೆಂದೇ ಹೆಸರಾಗಿರುವ ಕ್ರಿಕೆಟ್ ರಂಗ, ಸಿನೆಮಾ ರಂಗ, ರಾಜಕೀಯ ರಂಗದ ಗಣ್ಯರೆಲ್ಲರೂ ಹದಿನೆಂಟು ಮೆಟ್ಟಿಲೇರಿ ಶಾಸ್ತನ ಸೇವೆ ಮಾಡಿದ್ದಾರೆ.
ಮಾನ್ಯ ರಾಷ್ಟ್ರಪತಿಗಳ ಐತಿಹಾಸಿಕ ಭೇಟಿಗೆ ಸಾಕ್ಷಿಯಾದ ಶಬರಿಮಲೆ
ಈಗ 67 ವರ್ಷ ವಯಸ್ಸಿನ ಹಿರಿಯರಾದ ದೇಶದ ಪ್ರಥಮ ಪ್ರಜೆಯಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಇರುಮುಡಿ ಹೊತ್ತುಕೊಂಡು ಹದಿನೆಂಟು ಮೆಟ್ಟಿಲನ್ನು ಏರಿ ಶಾಸ್ತ್ರ ಬದ್ಧವಾಗಿ ದರ್ಶನ ಪಡೆದಿದ್ದಾರೆ. ಈ ಮೂಲಕ ಈ ರೀತಿಯ ಶೃದ್ಧಾಪೂರ್ವಕ ಸಾಹಸ ಮಾಡಿದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದು ಒಂದೆಡೆಯಾದರೆ ಅವರ ಅಂಗರಕ್ಷಕ ಹಾಗೂ ಭದ್ರತಾ ಸಿಬ್ಬಂದಿ ಕೂಡ ಇರುಮುಡಿ ಹೊತ್ತಿದ್ದು ವಿಶೇಷವಾಗಿತ್ತು
ಆದರೆ ಶಬರಿಮಲೆಗೆ ಬಂದ ಮೊದಲ ರಾಷ್ಟ್ರಪತಿ ಯಾರು ಗೊತ್ತೇ? ವಿ.ವಿ.ಗಿರಿ ಹೌದು, ವರಾಹಗಿರಿ ವೆಂಕಟ ಗಿರಿ ಎಂಬ ನಾಮಧೇಯದ ಇವರು ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವರು. ಮೂಲತಃ ದಕ್ಷಿಣಭಾರತದವರೇ ಆದ್ದರಿಂದ ಇವರ ಶಬರಿಮಲೆ ಭೇಟಿ ಸಹಜವೇ ಎನ್ನಬಹುದು.
ವಿ ವಿ ಗಿರಿಯರು ಬೆಟ್ಟ ಹತ್ತಲಿಲ್ಲ! ಇರುಮುಡಿ ಕಟ್ಟಿರಲಿಲ್ಲ
ವಿ ವಿ ಗಿರಿಯವರು 10-04-1973ರಲ್ಲಿ ಕುಟುಂಬ ಸಮೇತವಾಗಿ ಶಬರಿಮಲೆಗೆ ಭೇಟಿ ನೀಡಿದ್ದರು. ಆಗ ಅವರನ್ನು ದೇವಾಲಯ ಸಮಿತಿ ಪಂಪಾ ಗಣಪತಿ ಸನ್ನಿಧಾನದಲ್ಲಿ ಬರ ಮಾಡಿಕೊಂಡಿತ್ತು. ಗಿರಿಯವರಿಗೆ ಆಗ 78 ವರ್ಷ ವಯಸ್ಸಾಗಿದ್ದರಿಂದ ವಯೋ ಸಹಜ ದೌರ್ಬಲ್ಯವಿತ್ತು. ಹೀಗಾಗಿ 4 ಮಂದಿಯನ್ನು ಅವರಿಗೆ ದರ್ಶನ ಮಾಡಿಸಲು ನಿಯೋಜಿಸಿ ‘ಚಾರುಕಾಸರ’ ಎಂಬ ಬೆತ್ತದ ಕುರ್ಚಿಯ ಮೇಲೆ ಗಿರಿ ಅವರನ್ನು ಕೂರಿಸಿ ಶಬರಿಮಲೆ ಬೆಟ್ಟ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು.
ರಾಷ್ಟ್ರಪತಿಗಳನ್ನು ಹೊತ್ತೊಯ್ದದ್ದಕ್ಕೆ ಸಿಕ್ಕಿತ್ತು ಸರ್ಕಾರಿ ನೌಕರಿ!
ವಿವಿ ಗಿರಿಯವರು ದೇಗುಲಕ್ಕೆ ಬಂದಾಗ 1001 ಪಟಾಕಿಯನ್ನು ಹೊತ್ತಿಸಲಾಯಿತು. ನಂತರ ದೇವಸ್ವಂ ಬೋರ್ಡ್ನವರು ರಾಷ್ಟ್ರಪತಿಯವರ ಹಾಗೆಯೇ ರಾಷ್ಟ್ರದ ಗೌರವಕ್ಕಾಗಿ ಅಯ್ಯಪ್ಪನ ದೇಗುಲದ ಪಾರಂಪರಿಕ ಧ್ವಜಸ್ತಂಭದಲ್ಲಿ ಭಾರತದ ಬಾವುಟ ಹಾರಿಸಿದ್ದರು. 3 ತಾಸು ಅಲ್ಲಿ ತಂಗಿದ್ದ ಗಿರಿ ಮಧ್ಯಾಹ್ನದ ಮಹಾ ಪೂಜೆ ನೋಡಿಕೊಂಡು ಪರಿವಾರ ಸಮೇತ ಹಿಂದಿರುಗಿದರು. ತಾವು ವಾಪಾಸ್ ದೆಹಲಿಗೆ ಹೋದಾಗ ತಮ್ಮನ್ನು ಜಾಗೃತೆಯಿಂದ ಬೆಟ್ಟ ಹತ್ತಿಸಿ ದರ್ಶನ ಮಾಡಿಸಿ ಕರೆದೊಯ್ದ ನಾಲ್ಕೂ ಮಂದಿ ಪರಿಚಾರಕರಿಗೆ ಸರ್ಕಾರಿ ನೌಕರಿ ಕೊಡಲು ವಿವಿ ಗಿರಿ ಆದೇಶಿಸಿದ್ದರು! ಆದರೆ ಕೃಷ್ಣನ್ ಎಂಬ ಪರಿಚಾರಕರು ಹೇಗೋ ಈ ಅವಕಾಶದಿಂದ ವಂಚಿತರಾಗಿ ಉಳಿದುಬಿಟ್ಟರು. ಅದೊಂದು ದುರಂತವಾಗಿ ಹೋಯ್ತು!
ಇವೆಲ್ಲಾ ಅವಲೋಕಿಸಿದಾಗ ಇರುಮುಡಿ ಕಟ್ಟಿ ಶಾಸ್ತ್ರದ ಪ್ರಕಾರ ದೇಗುಲದ ಹದಿನೆಂಟು ಮೆಟ್ಟಿಲು ಏರಿ ವ್ರತಾಚರಣೆಯ ಸಮೇತ ದರ್ಶನ ತೆಗೆದುಕೊಂಡ ಏಕೈಕ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿವಿಗಿರಿಯವರು ದೇಗುಲಕ್ಕೆ ಭೇಟಿ ಕೊಟ್ಟಿದ್ದರೂ ಹದಿನೆಂಟು ಮೆಟ್ಟಿಲು ಏರಿರಲಿಲ್ಲ ಹಾಗೆಯೇ ಇರುಮುಡಿ ಹೊತ್ತಿರಲಿಲ್ಲ ಎಂಬುದನ್ನು ಗಮನಿಸಬೇಕು. ವಿವಿ ಗಿರಿಯವರು ಅದಾಗಿ ಎರಡು ವರ್ಷಕ್ಕೆ ಅಧಿಕಾರ ಕಳೆದುಕೊಂಡರು. ನಂತರ ಏಳು ವರ್ಷದಲ್ಲಿ ಹೃದಯಾಘಾತದಲ್ಲಿ ಮರಣ ಹೊಂದಿದರು.
