ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ ಸಮರ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಪರಸ್ಪರ ಏಕವಚನದಲ್ಲೇ ಆರೋಪ-ಪ್ರತಾರೋಪಗಳನ್ನು ಮುಂದುವರೆಸುತ್ತಿರುವ ಇಬ್ಬರ ಕಾಮೆಂಟ್‌ಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, “ನನ್ನ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ,” ಎಂದು ವಾಗ್ದಾಳಿ ನಡೆಸಿದರು. “ಮುಳ್ಳಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಮಗನೆ,” ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.
ಅವರು ಮುಂದುವರೆದು, “ಅವನ ಭಾಷೆಯಲ್ಲೇ ಉತ್ತರ ಹೇಳಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ,” ಎಂದು ಸ್ಪಷ್ಟಪಡಿಸಿದರು.
ಇತ್ತ ಚಿಕ್ಕಬಳ್ಳಾಪುರದಲ್ಲಿ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಶಾಸಕ ಪ್ರದೀಪ್ ಈಶ್ವರ್, “ನಾನು ಕತ್ತಲಲ್ಲಿ ಕಾಣಲ್ವಂತೆ, ಅಯೋಗ್ಯ. ನನ್ನ ಕ್ಷೇತ್ರದಲ್ಲಿ ನಾನು 2,500 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇನೆ. ಪ್ರತಾಪ್ ಸಿಂಹ 50-50 ಬಿಸ್ಕತ್ ಫೆವರೇಟ್ ಅಂತಾರೆ!” ಎಂದು ವ್ಯಂಗ್ಯವಾಡಿದರು.
ರಾಜ್ಯ ರಾಜಕೀಯದಲ್ಲಿ ಈ ಇಬ್ಬರ ವಾಕ್ ಸಮರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದ್ದು, ರಾಜಕೀಯ ನಾಯಕರು ಪರಸ್ಪರ ಗೌರವ ಕಾಪಾಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
