ಕಲಬುರಗಿ: ಆರ್‌ಎಸ್‌ಎಸ್ ವಿರುದ್ಧ ಸಮರ ಸಾರಿದ್ದ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದಲ್ಲೇ ತೊಡೆತಟ್ಟಲು ಸಂಘ ಪರಿವಾರ ಸಜ್ಜಾಗಿದೆ. ನವೆಂಬರ್ 2ರಂದು ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್ ಭರ್ಜರಿ ಸಿದ್ಧತೆ ನಡೆಸಿದೆ. ಇದರ ನಡುವೆ ಭೀಮ್ ಆರ್ಮಿ , ದಲಿತ ಸಂಘಟನೆಗಳು, ರೈತ ಸಂಘ, ಕ್ರಿಶ್ಚಿಯನ್ ಸಂಘಟನೆಗಳೂ ಕೂಡ ನವೆಂಬರ್ 2ರಂದೇ ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಕೋರಿ, ಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ಆರ್‌ಎಸ್‌ಎಸ್ ಸಲ್ಲಿಸಿರೋ ರಿಟ್ ಅರ್ಜಿ ವಿಚಾರಣೆ ಕಲಬುರಗಿ ಹೈಕೋರ್ಟ್ ಪೀಠದಲ್ಲಿಂದು ನಡೆಯಿತು. ಆದರೆ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿದೆ.
ನವೆಂಬರ್ 2 ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ಕೋರುವಂತೆ ಆರ್‌ಎಸ್‌ಎಸ್ ಕಲಬುರಗಿ ಹೈಕೋರ್ಟ್ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಮ್‌ಜಿಎಸ್ ಕಮಲ್ ಅವರಿದ್ದ ಏಕಸದಸ್ಯ ಪೀಠ ಕೈಗೆತ್ತಿಕೊಂಡಿತ್ತು. ಕೋರ್ಟ್ ಹಾಲ್ 4 ರಲ್ಲಿ ಅರ್ಜಿ ವಿಚಾರಣೆ ನಡೆಯಿತು.
ವಿಚಾರಣೆ ಮುಂದೂಡಿದ ಹೈಕೋರ್ಟ್ ಪೀಠ
ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 30ಕ್ಕೆ ಮುಂದೂಡಿದೆ. ವಾದ-ವಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ. ಅಕ್ಟೋಬರ್ 28ರವರೆಗೆ ಶಾಂತಿ ಸಭೆ ನಡೆಸಿ, ಅಕ್ಟೋಬರ್ 30ರಂದು ಮತ್ತೆ ವಿಚಾರಣೆಗೆ ಹಾಜರಾಗಿ ಅಂತ ಕಲಬುರಗಿ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಆದೇಶಿಸಿದ್ದಾರೆ.
ಚಿತ್ತಾಪುರದಲ್ಲಿ ನವೆಂಬರ್ 2ರಂದೇ ನಡೆಯುತ್ತಾ ಆರ್‌ಎಸ್‌ಎಸ್ ಪಥ ಸಂಚಲನ? ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್ ಪೀಠ
