ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ನಡೆದ ವಿಚಿತ್ರ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಸತೀಶ್ ಎಂಬುವರ ಮನೆಯೊಳಗೆ ಆಕಸ್ಮಿಕವಾಗಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದು, ಈ ನಿಗೂಢ ಘಟನೆಗೆ ಕಾರಣ ತಿಳಿಯದೆ ದಂಪತಿ ಭಯಭೀತರಾಗಿದ್ದಾರೆ.
ಹಾಲ್, ಬಾತ್‌ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆ ರಕ್ತದ ಕಲೆ!
ಸತೀಶ್ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಸಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಸೋಮವಾರ ಬೆಳಿಗ್ಗೆ ಸತೀಶ್ ಅವರ ಪತ್ನಿ ಮನೆ ಸ್ವಚ್ಛಗೊಳಿಸಿ, ಉಪಹಾರ ತಯಾರಿಸಲು ಅಡುಗೆಮನೆಗೆ ತೆರಳಿದ್ದರು. ಕೆಲವೇ ಕ್ಷಣಗಳಲ್ಲಿ ಮನೆ ಹಾಲ್, ಬಾತ್‌ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡವು. ಬೆಚ್ಚಿಬಿದ್ದ ದಂಪತಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.
ಮಂಡ್ಯದ ಮನೆಯಲ್ಲಿ ಸಿಕ್ಕ ರಕ್ತದ ಸ್ಯಾಂಪಲ್ ಲ್ಯಾಬ್ಗೆ
ಘಟನೆಯ ಮಾಹಿತಿ ಆಧರಿಸಿ ಬೆಸಗರಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಎಫ್‌ಎಸ್‌ಎಲ್ ಹಾಗೂ ಶ್ವಾನದಳದ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಮನೆಯಲ್ಲಿ ಕಂಡುಬಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅದು ನಿಜವಾಗಿಯೂ ಮಾನವ ರಕ್ತವೋ ಅಲ್ಲವೋ ಎಂಬುದನ್ನು ದೃಢಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಘಟನೆ ತಿಳಿದ ಸ್ಥಳೀಯರು ದಂಪತಿ ಮನೆಯ ಮುಂದೆ ಜಮಾಯಿಸಿದ್ದು, ಗ್ರಾಮದೆಲ್ಲೆಡೆ ಆತಂಕ ಮನೆಮಾಡಿತ್ತು.
ಸ್ಥಳೀಯರಲ್ಲಿ ಈ ಘಟನೆ ಆತಂಕ ಮತ್ತು ಕುತೂಹಲ ಮೂಡಿಸಿದ್ದು, ದಂಪತಿ ಆಸ್ತಿ ವಿವಾದದ ಹಿನ್ನೆಲೆ ಸಂಬಂಧಿಕರಿಂದ ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಎಲ್ಲಾ ಕೋಣೆಗಳಲ್ಲಿ ತನಿಖೆ ನಡೆಸಿದ್ದು, ಪ್ರಯೋಗಾಲಯದಿಂದ ಬರಬೇಕಾದ ರಿಪೋರ್ಟನ್ನು ಕಾದು ನೋಡಬೇಕಿದೆ.
