Ad image

ಮರಕ್ಕೆ ಕಟ್ಟಿ, ವಿವಸ್ತ್ರಗೊಳಿಸಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ಸ್ಥಳೀಯರು ಬರುತ್ತಿದ್ದಂತೆ ಬಾಯಿಗೆ ಮಣ್ಣಾಕಿ ಕಾಮುಕರು

Team SanjeMugilu
1 Min Read

ಚಿಕ್ಕಮಗಳೂರು: ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿಯನ್ನು ಮರಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ  ತಾಲೂಕಿನ ಕೊಗ್ರೆ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತ ಯುವತಿ ಬಸರೀಕಟ್ಟೆ ಗ್ರಾಮದ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿತ್ಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಿಂದ ಬಸರೀಕಟ್ಟೆ ಗ್ರಾಮಕ್ಕೆ ಹೋಗಿ ಬರುತ್ತಿದ್ದರು. ಮಂಗಳವಾರ (ಅ.28) ಅದೇ ರೀತಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ನಾಲ್ಕೈದು ಯುವಕರ ಗುಂಪು ದಾರಿಯಲ್ಲಿ ಕಾಯುತ್ತಾ ನಿಂತಿದ್ದರು. ಶಿಕ್ಷಕಿ ಬರುತ್ತಿದ್ದಂತೆ ಅವರ ಮೇಲೆ ಎರಗಿ ದೌರ್ಜನ್ಯ ಎಸಗಿದ್ದು, ಬಳಿಕ ಅಡಿಕೆ ಮರಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಕಿರುಚಿಕೊಳ್ಳುತ್ತಿದಂತೆ ಬಾಯಿಗೆ ಮಣ್ಣು ಹಾಕಿ ವಿಕೃತಿ ಮೆರೆದಿದ್ದಾರೆ. ಆದರೂ ಶಿಕ್ಷಕಿ ಕಿರುಚಿದ ಶಬ್ದ ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಜನರು ಬರುತ್ತಿದ್ದಂತೆ ಆರೋಪಿಗಳು ಕಬ್ಬಿಣ ರಾಡ್‌ನಿಂದ ಶಿಕ್ಷಕಿ ತಲೆಗೆ ಹೊಡೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅದೃಷ್ಟಾವಶಾತ್ ಸಾವಿನಿಂದ ಪಾರಾಗಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು. ಕೂಡಲೇ ಶಿಕ್ಷಕಿಯನ್ನು ಕೊಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಸದ್ಯ ಬಾಳೆಹೊನ್ನೂರು ಮೂಲದ ಭವಿತ್ (24) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂತ್ರಸ್ತ ಯುವತಿ ಪ್ರೀತಿ ನಿರಾಕರಿಸಿ, ಎರಡು ತಿಂಗಳಿನಿಂದ ಆತನ ಮೊಬೈಲ್ ನಂಬರ್‌ನ್ನು ಬ್ಲಾಕ್ ಮಾಡಿದ್ದಳು. ಹೀಗಾಗಿ ದುಷ್ಕೃತ್ಯ ಎಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

Share This Article