ನವದೆಹಲಿ/ವಿಜಯಪುರ: ಸ್ವಾಮೀಜಿಯಾಗಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ನೀವು ಗಂಭೀರವಾಗಿರಬೇಕು ಎಂದು ಕನ್ನೇರಿ ಕಾಡುಸಿದ್ದೇಶ್ವರ ಶ್ರೀಗಳಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ವಿಜಯಪುರ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕನ್ನೇರಿ ಕಾಡುಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ವಿಚಾರಣೆ ವೇಳೆ ನ್ಯಾಯಪೀಠ ಸ್ವಾಮೀಜಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಪೀಠ ವಿಚಾರಣೆ ನಡೆಸಿತು. ಸ್ವಾಮೀಜಿಯಾಗಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ, ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ನೀವು ಒಳ್ಳೆಯ ಪ್ರಜೆಯಲ್ಲ, ಅವಹೇಳನಕಾರಿ ಭಾಷೆ ಬಳಸಿದ್ದೀರಿ, ಇದು ವಾಕ್ ಸ್ವಾತಂತ್ರ‍್ಯ ವ್ಯಾಪ್ತಿಯಲ್ಲಿಲ್ಲ ಎಂದು ಆಕ್ರೋಶ ಹೊರಹಾಕಿದೆ.
ಗುಪ್ತಚರ ಇಲಾಖೆ ಮಾಹಿತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕನ್ನೇರಿ ಕಾಡುಸಿದ್ದೇಶ್ವರ ಸ್ವಾಮೀಜಿಯನ್ನು ವಿಜಯಪುರ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧಿಸಿದ್ದರು. ಇದನ್ನು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಹೈಕೋರ್ಟ್ ಸ್ವಾಮೀಜಿ ಹೇಳಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿ, ನಿರ್ಬಂಧ ನಿರ್ಧಾರ ಸರಿಯಾಗಿದೆ ಎಂದು ಹೇಳಿತು. ಹೈಕೋರ್ಟ್ ಕೂಡ ಅನುಮತಿ ನಿರಾಕರಿಸಿದ ಹಿನ್ನೆಲೆ ಶ್ರೀಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
