Ad image

ಕಾಂಗ್ರೆಸ್‌ನಂತೆ ಬಿಜೆಪಿಯಲ್ಲೂ ‘ನವೆಂಬರ್ ಕ್ರಾಂತಿ’!

Team SanjeMugilu
2 Min Read

ಬೆಂಗಳೂರು: ರಾಜ್ಯ ಬಿಜೆಪಿ ಅನ್ನೋದು ಮನೆಯೊಂದು ಮೂರು ಬಾಗಿಲು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿಪಕ್ಷ ನಾಯಕರದ್ದೊಂದು ಬಣ ಆದ್ರೆ, ರಾಜ್ಯಾಧ್ಯಕ್ಷರದ್ದು ಒಂದು ಬಣ.. ರೆಬೆಲ್ ಬಣ ಒಂದು ಆದ್ರೆ, ಮತ್ತೊಂದು ಅಲ್ಲೂ ಸಲ್ಲುವವರು, ಇಲ್ಲೂ ಸಲ್ಲುವವರು ಅನ್ನುವವರದ್ದೊಂದು ಬಣ.. ಈ ಬಣಗಳ ಮಧ್ಯೆ ಅಯ್ಯೋ ಪಾಪ ಅನ್ನೋ ಪಾಡು ಮಾತ್ರ ಕಾರ್ಯಕರ್ತರದ್ದು..
ಹೌದು.. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಗುಟ್ಟಾಗಿ ಇರುವ ಸುದ್ದಿಯಲ್ಲ. ಒಬ್ಬರೊಬ್ಬರದ್ದು ಒಬ್ಬೊಬ್ಬರು ಕಾಲೆಳೀತಾನೇ ಇರ್ತಾರೆ. ಈತನ್ಮಧ್ಯೆ ರಾಜ್ಯ ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಅನ್ನೋದು ಸದ್ಯದ ಲೇಟೆಸ್ಟ್ ಸುದ್ದಿ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗದಿದ್ದರೂ ಸಹ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಆಗೋದು ಖಂಡಿತಾ ಅನ್ನೋದು 99% ನಂಬಲರ್ಹ ಮೂಲಗಳ ಸುದ್ದಿ. ಬಿಹಾರ ಚುನಾವಣೆ ನಡೆದ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಕ್ಕೆ ಸರ್ಜರಿ ನಡೆಯಲಿದೆ.
ಈತನ್ಮಧ್ಯೆ ಕಾಂಗ್ರೆಸ್‌ ಜೊತೆಗೆ ಬಿಜೆಪಿಯಲ್ಲೂ ‘ನವೆಂಬರ್ ಕ್ರಾಂತಿ’ ನಡೆಯಲಿದೆ ಅನ್ನೋ ಸುದ್ದಿ ಸದ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ. ಇದಕ್ಕೆ ಪೂರಕವೆಂಬಂತೆ ರೆಬೆಲ್ ಟೀಮ್ ಈಗಾಗಲೇ ಅಲರ್ಟ್ ಆಗಿದ್ದು ಒಂದೆಡೆ ಸೇರಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಣ ತೊಟ್ಟಿದೆ. ಬಿಹಾರ ಚುನಾವಣೆ ಬಳಿಕ ಕರ್ನಾಟಕದಲ್ಲೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ನಿರೀಕ್ಷೆ ಮಾಡಲಾಗಿದ್ದು, ಅದಕ್ಕಾಗಿ ಇಂದು ಬಿಜೆಪಿ ರೆಬೆಲ್ ನಾಯಕರು ಸಭೆ ಸೇರಿದ್ದಾರೆ.
ರೆಬೆಲ್ ನಾಯಕರ ಸಭೆಯಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹಾಜರಾಗಿದ್ದು, ಜೊತೆಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸೇರಿ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಚರ್ಚೆ ನಡೆಸಿದ್ದಾರೆ. ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರದ ನಿವಾಸದಲ್ಲಿ ನಡೆದ ಸಭೆಯಲ್ಲಿ ರೆಬೆಲ್ ತಂಡದ ಮುಂದಿನ ನಡೆ ಹಾಗೂ ವಿಜಯೇಂದ್ರ‌ ಬದಲಾವಣೆಗೆ ವರಿಷ್ಠರಿಗೆ ಮತ್ತೊಮ್ಮೆ ಏನೆಲ್ಲ ಹೇಳಬೇಕೆಂದು ಚರ್ಚೆ ನಡೆಸಿದ್ದಾರೆ.
ಬಿಜೆಪಿಯಿಂದ ಉಚ್ಚಾಟನೆಗೊಂಡರೂ ಸಹ ರಮೇಶ್ ಜಾರಕಿಹೊಳಿ ಮತ್ತು ಕುಮಾರ್ ಬಂಗಾರಪ್ಪ ಅವರು ಬಸನ ಗೌಡ ಪಾಟೀಲ್ ಯತ್ನಾಳ್ ಸಖ್ಯವನ್ನು ಬಿಟ್ಟಿಲ್ಲ ಅನ್ನೋದು ಈ ರಹಸ್ಯ ಸಭೆಯ ಮೂಲಕ ಜಗಜ್ಜಾಹೀರಾಗಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗದಿದ್ದರೂ ಸಹ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಆಗೋದು ಖಂಡಿತಾ ಅಂತಾ ಹೇಳಲಾಗ್ತಿದೆ. ಅದರಂತೇ ಬಿಜೆಪಿಯಲ್ಲೂ ಸಹ ನವೆಂಬರ್ ಕ್ರಾಂತಿ ನಡೆಯುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Share This Article