ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೆರೆಗದ್ದೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದು, ಬೆಳೆ ನಾಶ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಕೊನೆಗೂ ಸೆರೆಯಾಗಿದೆ. ಭಾನುವಾರ ಸಂಜೆಯಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಕೊನೆಗೂ ಹಂತಕ ಆನೆಯನ್ನು ಲಾಕ್ ಮಾಡಿದೆ.
ರಾಜ್ಯ ಸರ್ಕಾರದಿಂದ ಹಂತಕ ಕಾಡಾನೆ ಸೆರೆಗಾಗಿ ಆದೇಶ
ಶುಕ್ರವಾರ ಕೆರೆಕಟ್ಟೆ ಸಮೀಪದ ಕೆರೆಗದ್ದೆ ಗ್ರಾಮದ 44 ವರ್ಷದ ಹರೀಶ್ ಶೆಟ್ಟಿ, 55 ವರ್ಷದ ಉಮೇಶ್ ಗೌಡ ಅವರ ಮೇಲೆ ಕಾಡಾನೆ ದಾಳಿ ಮಾಡಿ ಭೀಕರವಾಗಿ ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಜನರು ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಾವನ್ನಪ್ಪಿದ ಸ್ಥಳದಿಂದ ಮೃತ ದೇಹ ತೆಗೆಯಲು ಬಿಡದೆ ಸಂಜೆಯವರೆಗೂ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಹಂತಕ ಕಾಡಾನೆ ಸೆರೆಗಾಗಿ ಆದೇಶ ನೀಡಿತ್ತು.
ಭಾನುವಾರ ಸಂಜೆ ಕಿಲ್ಲರ್ ಕಾಡಾನೆ ಸೆರೆ
ಹಂತಕ ಕಾಡಾನೆ ಸೆರೆ ಕಾರ್ಯಾಚರಣೆಗಾಗಿ ದುಬಾರೆ ಆನೆ ಶಿಬಿರದಿಂದ ಏಕಲವ್ಯ ಟೀಮ್ ಶೃಂಗೇರಿ ತಾಲೂಕಿನ ಕೆರೆ ಕಟ್ಟೆ ಕ್ಯಾಂಪ್ಗೆ ಬಂದಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಶೃಂಗೇರಿ ತಾಲೂಕಿನ ಭಗವತಿ ಪ್ರದೇಶದ ಸಮೀಪದಲ್ಲೇ ಕುಮ್ಕಿ ಆನಗೆಳಿದ್ದವು. ಇದೇ ಪ್ರದೇಶದ ಸಮೀಪ ಕಾಡಾನೆ ಓಡಾಟ ನಡೆಸಿದ್ದು ಭಾನುವಾರ ಸಂಜೆಯ ಕಾರ್ಯಾಚರಣೆ ವೇಳೆ ತಿಳಿದುಬಂದಿದೆ. ಕಿಲ್ಲರ್ ಸಲಗದ ಓಡಾಟದ ಸುಳಿವು ಸಿಗುತ್ತಿದ್ದಂತೆ ಅಲರ್ಟ್ ಆದ ಅರಣ್ಯ ಇಲಾಖೆಯ ಸಿಬ್ಬಂದಿ, ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ್ದಾರೆ. ಭಗವತಿ ಪ್ರದೇಶದ ಬಳಿ ಕಾಡಾನೆಗೆ ಪಶು ವೈದ್ಯರು ಡಾಟ್ ಮಾಡಿದ್ದಾರೆ. ಏಕಲವ್ಯ ನೇತೃತ್ವದ ಹರ್ಷ, ಅಜೇಯ, ಧನಂಜಯ, ಪ್ರಶಾಂತ ಕುಮ್ಕಿ ಆನೆಗಳು ಕಾರ್ಯಾಚರಣೆ ನಡೆಸಿದ್ದು, ಹಂತಕ ಕಾಡಾನೆಯನ್ನು ಲಾಕ್ ಮಾಡಲಾಗಿದೆ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದಕಾರ್ಯಾಚರಣೆಯನ್ನು ಭಾನುವಾರ ರಾತ್ರಿಯೇ ನಡೆಸಿದ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಚರಣೆ ಯಶಸ್ವಿಯಾಗಿದೆ.
