Ad image

ಕೊನೆಗೂ ಕನಸು ನನಸು – ಭಾರತ ಈಗ ವಿಶ್ವ ಮಹಿಳಾ ಕ್ರಿಕೆಟಿಗೆ ಬಾಸ್‌

Team SanjeMugilu
1 Min Read

ಮುಂಬೈ: ಚೊಚ್ಚಲ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ ಆಗಿ ಭಾರತ  ಹೊಮ್ಮಿದೆ. ಫೈನಲ್‌ನಲ್ಲಿ ಆಫ್ರಿಕಾ  ವಿರುದ್ಧ 52 ರನ್‌ಗಳ ಜಯ ಸಾಧಿಸಿದ ಮೊದಲ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದೆ.

ಮೊದಲು ಬ್ಯಾಟ್‌ ಬೀಸಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 298 ರನ್‌ ಗಳಿಸಿತು. ಕಠಿಣ ಗುರಿಯನ್ನು ಬೆನ್ನೆಟ್ಟಿದ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗಳಿಸಿ ಆಲೌಟ್‌ ಆಯ್ತು.

ಆರಂಭಿಕ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ 23 ರನ್‌ ಗಳಿಸಿ ರನೌಟ್‌ಗೆ ಬಲಿಯಾದರೆ ಅನ್ನೆಕೆ ಬಾಷ್ ಶೂನ್ಯಕ್ಕೆ ಔಟಾದಾಗ ಪಂದ್ಯ ಭಾರತದ ಕಡೆ ತಿರುಗಿತ್ತು. ಆದರೆ ಎರಡನೇ ವಿಕೆಟಿಗೆ ಲಾರಾ ವೊಲ್ವಾರ್ಡ್ಟ್ ಮತ್ತು ಸುನೆ ಲೂಸ್ 51 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿದರು. ಇವರಿಬ್ಬರು ಗಟ್ಟಿಯಾಗಿ ನಿಲ್ಲುತ್ತಿದ್ದಂತೆ ನಾಯಕಿ ಹರ್ಮನ್‌ ಶಫಾಲಿ ವರ್ಮಾ ಕೈಯಲ್ಲಿ ಬಾಲ್‌ ನೀಡಿದರು.

ಈ ಪ್ರಯೋಗ ಯಶಸ್ವಿ ಎಂಬಂತೆ 25 ರನ್‌ ಗಳಿಸಿದ್ದ ಸುನೆ ಲೂಸ್ ಶಫಾಲಿ ಕೈಗೆ ಕ್ಯಾಚ್‌ ನೀಡಿ ಔಟಾದರು. ನಂತರ ಬಂದ ಮರಿಝನ್ನೆ ಕಪ್ 4 ರನ್‌ ಗಳಿಸಿ ಶಫಾಲಿ ಬೌಲಿಂಗ್‌ನಲ್ಲಿ ಕೀಪರ್‌ ರಿಚಾ ಘೋಷ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.
ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ನಾಯಕಿ ಲಾರಾ ವೊಲ್ವಾರ್ಡ್ಟ್ ಶತಕ ಸಿಡಿಸಿ ಹೋರಾಡುವ ಮುನ್ಸೂಚನೆ ನೀಡಿದರು. ಆದರೆ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಅಮನ್‌ಜೋತ್‌ ಕೌರ್‌ ಹಿಡಿದ ಕ್ಯಾಚ್‌ಗೆ 101 (98 ಎಸೆತ,11 ಬೌಂಡರಿ, 1 ಸಿಕ್ಸ್‌) ಸಿಡಿಸಿ ಔಟಾದರು.

ವೊಲ್ವಾರ್ಡ್ಟ್ ಔಟಾದಂತೆ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಕಮಾಲ್‌ ಮಾಡಿದರು. ಒಟ್ಟು ಐದು ವಿಕೆಟ್‌ ಪಡೆಯುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟರು. ನಾಡಿನ್‌ ಡಿ ಕ್ಲಾರ್ಕ್‌ ಅವರ ಕ್ಯಾಚನ್ನು ಹರ್ಮನ್‌ ಪಡೆಯುತ್ತಿದ್ದಂತೆ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತು.

Share This Article