Ad image

ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಹೆಚ್.ವೈ ಮೇಟಿ ನಿಧನ

Team SanjeMugilu
1 Min Read

ಬೆಂಗಳೂರು/ಬಾಗಲಕೋಟೆ: ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಹೆಚ್‌.ವೈ ಮೇಟಿ  (79) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.ಎರಡು ದಿನಗಳ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಶಾಸಕ ಮೇಟಿ ಅವರ ಆರೋಗ್ಯ ವಿಚಾರಿಸಿದ್ದರು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು.

ಮೇಟಿ ಜೀವನ ಪಯಣ
ಮೇಟಿ ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಪೂರ್ಣ ಹೆಸರು ಹುಲ್ಲಪ್ಪ ಯಮನಪ್ಪ ಮೇಟಿ. 1946ರ ಅ.9ರಂದು ವಿಜಯಪುರ ಜಿಲ್ಲೆಯ ತಿಮ್ಮಾಪುರದಲ್ಲಿ ಜನಿಸಿದರು. 8ನೇ ತರಗತಿ ವರೆಗೆ ವಿಧ್ಯಾಭ್ಯಾಸ ಮಾಡಿದ್ದ ಇವರು, ಕೆಲ ಸಮಯದ ಬಳಿಕ ಓದಿಗೆ ಗುಡ್‌ಬೈ ಹೇಳಿ ರಾಜಕೀಯ ಪಯಣ ಶುರು ಮಾಡಿದರು.

1989ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾದಳದಿಂದ ಮೊದಲ ಬಾರಿಗೆ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1994ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಆಯ್ಕೆಯಾಗಿ 1994ರಿಂದ 96ರ ವರೆಗೆ ಅರಣ್ಯ ಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರು. 1996ರಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಾಗಲಕೋಟೆಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. ರಾಮಕೃಷ್ಣ ಹೆಗಡೆ ಅವ್ರನ್ನೇ ಸೋಲಿಸಿದ್ದ ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ಅವರನ್ನ ಸೋಲಿಸಿ ಪಾರ್ಲಿಮೆಂಟ್‌ ಪ್ರವೇಶಿಸಿದರು.

2004 ರಲ್ಲಿ ಮತ್ತೆ ಗುಳೇದಗುಡ್ಡ ಕ್ಷೇತ್ರದಿಂದ ಜೆಡಿಎಸ್‌ ಶಾಸಕರಾಗಿ ಆಯ್ಕೆಯಾದ ಮೇಟಿ 2008ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಪುನಃ ಬಾಗಲಕೋಟೆ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ ಸೋಲು ಕಂಡರು. 2013ರಲ್ಲಿ ಪುನಃ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾದರು. 2016-17ರ ಅವಧಿಯಲ್ಲಿ ಅಬಕಾರಿ ಸಚಿವರಾಗಿ ಆಯ್ಕೆಯಾದರು. 2017ರಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.

ಇದಾದ ಬಳಿಕ ಮತ್ತೆ ಶಾಸಕರಾಗಿ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿಯೂ ಆಯ್ಕೆಯಾದ ಮೇಟಿ ಹಾಲಿ ಬಾಗಲಕೋಟೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ರೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

Share This Article