Ad image

ಕಬ್ಬು ಬೆಳಗಾರರ ಕಿಚ್ಚು ಆರಿಸಲು ಖುದ್ದು ಅಖಾಡಕ್ಕಿಳಿದ ಸಿದ್ದರಾಮಯ್ಯ – ಕೇಂದ್ರ ನೆರವಿಗೆ ಬರುವಂತೆ ಮೋದಿಗೆ ಪತ್ರ

Team SanjeMugilu
2 Min Read

ಬೆಂಗಳೂರು: ಪ್ರತೀ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಮಾಡಬೇಕು ಅಂತಾ ಪಟ್ಟು ಹಿಡಿದಿರುವ ರೈತರ ಹೋರಾಟ ತೀವ್ರಗೊಂಡಿದೆ. ದಿನಕ್ಕೊಬ್ಬರು ಸಚಿವರು ರೈತರ ಪ್ರತಿಭಟನಾ  ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಆದ್ರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಹೀಗಾಗಿ ಈ ಕಬ್ಬಿನ ಕಿಚ್ಚು ಆರಿಸಲು ಸ್ವತಃ ಸಿಎಂ ಸಿದ್ದರಾಮಯ್ಯ  ಅವರೇ ಪ್ರವೇಶಿಸಿದ್ದಾರೆ.

ರೈತರ ಈ ಹೋರಾಟದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ಸಮಯ ಕೋರಿ ಪತ್ರ ಬರೆದಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಗಂಭೀರ ಸಮಸ್ಯೆ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲು ತುರ್ತು ಅವಕಾಶ ಕೋರಿ ಪತ್ರ ಬರೆಯುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಸಂಧಾನಕ್ಕೆ ರಾಜ್ಯ ಸರ್ಕಾರ ನಿರಂತರ ಪ್ರಯತ್ನಿಸಿದರೂ ಹೋರಾಟ ತೀವ್ರಗೊಂಡಿದೆ. ಕಟಾವು ಮತ್ತು ಸಾರಿಗೆ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ರೈತರಿಗೆ ಸಿಗುವ ಲಾಭ ಕಡಿಮೆ. ಪ್ರತಿ ಟನ್‌ಗೆ 800 ರಿಂದ 900 ರೂ. ವರೆಗೆ ವೆಚ್ಚ ಇರುತ್ತದೆ. ರೈತನಿಗೆ ತಲುಪುವ ಹಣ ಕೇವಲ ಪ್ರತಿ ಟನ್‌ಗೆ 2,600 ರಿಂದ 3 ಸಾವಿರ ರೂ. ಮಾತ್ರ. ಹೀಗಾಗಿ ರೈತರು ಮತ್ತು ಗ್ರಾಮೀಣ ಆರ್ಥಿಕತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಸರ್ಕಾರ ರೈತರ ಹೋರಾಟವನ್ನು ಶಮನಗೊಳಿಸಲು ಈಗಾಗಲೇ ತೊಡಗಿಸಿಕೊಂಡಿದೆ, ಎಲ್ಲಾ ಪಾಲುದಾರರೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನೂ ನಡೆಸಲಾಗಿದೆ. ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆಗಳು 11.25% ವಸೂಲಾತಿ ದರದಲ್ಲಿ ಪ್ರತಿ ಟನ್‌ಗೆ 3,200 ರೂ. ಮತ್ತು 10.25% ವಸೂಲಾತಿ ದರದಲ್ಲಿ ಪ್ರತಿ ಟನ್‌ಗೆ 3,100 ರೂ. ಪಾವತಿಸುವಂತೆ ಸೂಚಿಸಿದ್ದಾರೆ. ಇದರಲ್ಲಿ ಕೊಯ್ಲು ಮತ್ತು ಸಾರಿಗೆ ಶುಲ್ಕಗಳು ಸೇರಿವೆ. ನಾವು ಡಿಜಿಟಲ್ ತೂಕದ ವ್ಯವಸ್ಥೆಯನ್ನ ಪರಿಚಯಿಸಿದ್ದು, ವಸೂಲಾತಿ, ತೂಕ, ಕಡಿತ ಮತ್ತು ಪಾವತಿಗಳನ್ನ ಮೇಲ್ವಿಚಾರಣೆ ಮಾಡಲು ಸಮಿತಿಗಳನ್ನೂ ರಚಿಸಿದ್ದೇವೆ. ರೈತರ ಹಿತಾಸಕ್ತಿಗಳನ್ನು ರಕ್ಷಿಸಲು APMC ಕೇಂದ್ರಗಳಲ್ಲಿ ಉಚಿತ ತೂಕದ ಯಂತ್ರಗಳನ್ನೂ ಒದಗಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕ್ರಮಗಳ ಹೊರತಾಗಿಯೂ, ರೈತರು ಅತೃಪ್ತರಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೆದ್ದಾರಿ ತಡೆ ಮತ್ತು ಇತರ ಹೋರಾಟಗಳಿಗೆ ಮುಂದಾಗುವುದಾಗಿ ಬೆದರಿಕೆ ಹಾಕಿದ್ದಾರೆ. 2025-26ರ ಋತುವಿನಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) 10.25% ಮೂಲ ವಸೂಲಾತಿ ದರಕ್ಕೆ ಕ್ವಿಂಟಲ್‌ಗೆ 2,355 (ಪ್ರತಿ ಟನ್‌ಗೆ 23,550) ಆಗಿದೆ. ಆದಾಗ್ಯೂ, ಕಡ್ಡಾಯ ಕೊಯ್ಲು ಮತ್ತು ಸಾರಿಗೆ ವೆಚ್ಚವನ್ನು ಪ್ರತಿ ಟನ್‌ಗೆ 800 ರೂ. ರಿಂದ 900 ರೂ. ವರೆಗೆ ಕಡಿತಗೊಳಿಸಿದ ನಂತರ, ರೈತನಿಗೆ ತಲುಪುವ ಪರಿಣಾಮಕಾರಿ ಪಾವತಿ ಪ್ರತಿ ಟನ್‌ಗೆ 2,600- 3,000 ಮಾತ್ರ ಆಗಿ. ಆದಾಗ್ಯೂ, ರಸಗೊಬ್ಬರ, ಕಾರ್ಮಿಕ, ನೀರಾವರಿ ಮತ್ತು ಸಾರಿಗೆ ವೆಚ್ಚಗಳಲ್ಲಿನ ತೀವ್ರ ಏರಿಕೆಯಿಂದಾಗಿ, ಈ ಬೆಲೆ ನಿಗದಿಯು ಕಬ್ಬು ಕೃಷಿಯನ್ನ ಆರ್ಥಿಕವಾಗಿ ಸಮರ್ಥನೀಯವಲ್ಲದಂತೆ ಮಾಡಿದೆ ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಪತ್ರದಲ್ಲಿ ಕೋರಿದ್ದಾರೆ.

Share This Article