Ad image

ದೆಹಲಿ ಸ್ಫೋಟ ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್; ಬೆಂಗಳೂರಲ್ಲಿ ಬಿಗಿ ಭದ್ರತೆ, ವಾಹನಗಳ ತಪಾಸಣೆ

Team SanjeMugilu
2 Min Read

ಬೆಂಗಳೂರು: ದೆಹಲಿಯಲ್ಲಿ ಕಾರು ಸ್ಫೋಟದ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬಿಗ್ ಅಲರ್ಟ್ ಘೋಷಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಡೀ ಖಾಕಿ ಕಟ್ಟೆಚ್ಚರ ವಹಿಸಿದೆ. ನಾಕಾಬಂದಿ ಹಾಕಿ ಪೊಲೀಸರು , ಪ್ರತಿಯೊಂದು ವಾಹನಗಳ ತಪಾಸಣೆ  ನಡೆಸಿದ್ದಾರೆ. ವಿಮಾನ ನಿಲ್ದಾಣ, ಮೆಟ್ರೋ ಸ್ಟೇಷನ್​​, ಮಾಲ್​ಗಳು​​​​ ಸೇರಿದಂತೆ ನಗರದೆಲ್ಲೆಡೆ ತಪಾಸಣೆ ಹಾಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಲಾಡ್ಜ್​, ಹೋಟೆಲ್​ಗಳ ಮೇಲೂ ನಿಗಾ
ಬೆಂಗಳೂರಲ್ಲಿ ಪೊಲೀಸರು ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿದ್ದು, ಅನುಮಾನಸ್ಪದ ವಾಹನಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ. ಡಿಸಿಪಿಗಳೇ ಖುದ್ದು ಫೀಲ್ಡ್​ಗೆ ಇಳಿದು ಪರಿಶೀಲನೆ ನಡೆಸಿದ್ದಾರೆ. ಪ್ರತಿ ವಿಭಾಗದ ಮುಖ್ಯ ರಸ್ತೆಗಳಲ್ಲಿ ಪೊಲೀಸರಿಂದ ತಪಾಸಣೆ ನಡೆದಿದ್ದು, ಲಾಡ್ಜ್ ಹಾಗೂ ಹೊಟೇಲ್​​ಗಳ ಮೇಲೂ ನಿಗಾ ವಹಿಸಲಾಗಿದೆ.
ಬಿಗ್​ ಅಲರ್ಟ್ ಘೋಷಣೆ
ದೆಹಲಿ ಸ್ಪೋಟದ ಬಳಿಕ ನಗರದಲ್ಲಿ ಕಮಿಷನರ್​ ಬಿಗ್​ ಅಲರ್ಟ್ ಘೋಷಿಸಿದ್ದಾರೆ. ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಮೆಟ್ರೋ ಸ್ಟೇಷನ್ಸ್ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಕಮೀಷನರ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಅಯಾ ವಿಭಾಗಗಳಲ್ಲಿ ಡಿಸಿಪಿಗಳೇ ಪರಿಶೀಲನೆಗೆ ಮುಂದಾಗಿದ್ದಾರೆ.
ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಭದ್ರತೆ
ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ಸ್ಟೇಷನ್, ಮಾಲ್ ಗಳು, ವ್ಯವಹಾರಿಕ‌ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಿನ ನಿಗಾ ಹಾಗೂ 24 ಗಂಟೆಗಳ ಮೇಲ್ವಿಚಾರಣೆ ವಹಿಸಲು ಅಧಿಕಾರಿಗಳು ತಿಳಿಸಿದ್ದಾರೆ.
ನಗರಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆದಿದೆ. ಒಳ ಬರುವ, ಹೊರ ಹೋಗುವ ರಸ್ತೆಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಪ್ರತಿಯೊಂದು ವಾಹನಗಳನ್ನ ತಪಾಸಣೆ ನಡೆಸಿ ಎಂಟ್ರಿ ಮಾಡಲು ಸೂಚಿಸಿದ್ದಾರೆ. ಅನುಮಾನಸ್ಪದ ಚಟುವಟಿಕೆ ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಲು ತಿಳಿಸಿದ್ದಾರೆ.
ಮಾಲ್​​ಗಳಲ್ಲಿ ಪೊಲೀಸರ ನಿಗಾ
ಜನನಿಬಿಡ ಮಾಲ್ ಗಳಲ್ಲಿ ಭದ್ರತೆ ಕುರಿತು ತಪಾಸಣೆ ನಡೆಸಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದಿ, ವಿಜಯನಗರ ಬಳಿ ನಾಕಾಬಂದಿ ಹಾಕಿದ್ದು, ಅನುಮಾನಸ್ಪದ ವಾಹನಗಳನ್ನ ತಪಾಸಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಏರ್​ಪೋರ್ಟ್​ನಲ್ಲಿ ಹೈ ಅಲರ್ಟ್​
ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್​ನಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈಶಾನ್ಯ ವಿಭಾಗ ಡಿಸಿಪಿ ಸಜೀತ್ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ. ಭದ್ರತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಶ್ವಾನದಳದ ಮೂಲಕ ತಪಾಸಣೆಗೆ ಮುಂದಾಗಿದ್ದಾರೆ.
ಅದೇ ರೀತಿ ಮೆಟ್ರೋ ಸ್ಟೇಷನ್ ಗಳಲ್ಲೂ ಶ್ವಾನದಳದ ಸಮೇತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ವಿಭಾಗ ವ್ಯಾಪ್ತಿಯಲ್ಲಿ ವಾಹನಗಳು, ಮೆಟ್ರೋ ನಿಲ್ದಾಣಗಳ ಬಳಿ ನಿಗಾವಹಿಸಲಾಗಿದೆ. ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಹೈಗ್ರೌಂಡ್ಸ್, ಟೌನ್ ಹಾಲ್, ಎಂಜಿ ರಸ್ತೆ ಸೇರಿದಂತೆ ಹಲವೆಡೆ ಪರಿಶೀಲನೆ ನಡೆದಿದೆ.

Share This Article