ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳಿಗೆ, ಅಪರಾಧಿಗಳಿಗೆ ವಿಶೇಷ ಸೌಲಭ್ಯ ಸಿಗುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಎಂದರೆ ರೆಸಾರ್ಟ್ ರೀತಿ ಕಾಣುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಜೈಲು ಮುಖ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಇದೀಗ ಅಧಿಕಾರಿಗಳು ಜೈಲಲ್ಲಿರುವ ಬಂದಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಜೈಲಲ್ಲಿ ಬಂದಿಗಳೇ ಡ್ಯಾನ್ಸ್ ಮಾಡಿ, ಮೊಬೈಲ್‌ನಲ್ಲಿ ವೀಡಿಯೊ ಮಾಡಿದ್ದು, ಇದರಿಂದ ಜೈಲು ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳು ಎದ್ದಿತ್ತು. ಇದೀಗ ಈ ಸಂಬಂಧ ನಾಲ್ವರು ವಿಚಾರಣಾಧೀನ ಬಂದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಾಲ್ವರು ವಿಚಾರಣಾಧೀನ ಬಂದಿಗಳ ವಿರುದ್ಧ ಎಫ್ಐಆರ್!
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನಾಲ್ವರು ವಿಚಾರಣಾಧೀನ ಬಂದಿಗಳ ವಿರುದ್ಧ ಎಫ್ಐಆರ್ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ಕಾರ್ತಿಕ್, ಧನಂಜಯ, ಮಂಜುನಾಥ್ ಅಲಿಯಾಸ್ ಕೋಳಿ ಮಂಜ, ಚರಣ್ ರಾವ್ ಸೇರಿದ್ದಾರೆ. ಘಟನೆ 2018ರ ನವೆಂಬರ್‌ನಿಂದ 2025ರ ನವೆಂಬರ್ ಅವಧಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಬಿಎನ್‌ಎಸ್ 42 ಮತ್ತು ಕಾರಾಗೃಹ ಕಾಯ್ದೆ 2022 ಅಡಿ ಪ್ರಕರಣ ದಾಖಲಿಸಲಾಗಿದೆ.
ಡ್ಯಾನ್ಸ್ ಮಾಡಿದ್ದು, ವಿಡಿಯೋ ಮಾಡಿದರ ಬಗ್ಗೆ ತನಿಖೆ!
ಬ್ಯಾರಕ್ 8ರ ಕೊಠಡಿ ಸಂಖ್ಯೆ 7ರಲ್ಲಿ ಡ್ಯಾನ್ಸ್ ನಡೆದಿದೆ. ಕೊಠಡಿಯೊಳಗೆ ಬಂದಿಗಳು ಡ್ಯಾನ್ಸ್ ಮಾಡುತ್ತಿರುವುದು, ನಿಷೇಧಿತ ವಸ್ತುಗಳೊಂದಿಗೆ ಕಾಣಿಸಿಕೊಂಡಿರುವುದು ವೀಡಿಯೊದಲ್ಲಿ ಗೋಚರಿಸಿದೆ. ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದವರು, ಮೊಬೈಲ್ ತಂದವರು, ಯಾವಾಗ ಚಿತ್ರೀಕರಿಸಿದರು, ಸರ್ಕ್ಯುಲೇಟ್ ಮಾಡಿದವರು ಎಲ್ಲರ ವಿರುದ್ಧ ತನಿಖೆ ನಡೆಯುತ್ತಿದೆ. ಪರಪ್ಪನ ಅಗ್ರಹಾರ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೊಬೈಲ್ ಬಳಸಿದ್ದ ಮೂವರು ಬಂದಿಗಳನ್ನು ಜೈಲು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಸ್ಮಗ್ಲಿಂಗ್ ಆರೋಪಿ ತರುಣ್ ಕೊಂಡೂರು, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ, ಮತ್ತೊಬ್ಬ ಆರೋಪಿ ಜುಹಾದ್ ಹಮೀದ್ ಶಕೀಲ್ ಮನ್ನಾ ಇವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಮೊಬೈಲ್ ಹೇಗೆ ಬಂತು? ಬಿಂದಾಸ್ ಜೀವನ ಶೈಲಿ ಹೇಗೆ ಸಾಧ್ಯ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆಂತರಿಕ ತನಿಖೆಗಾಗಿ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಜೈಲು ಭದ್ರತೆಯ ದುರ್ಬಲತೆಯನ್ನು ಬಯಲು ಮಾಡಿದೆ. ನಿಷೇಧಿತ ಮೊಬೈಲ್ ಒಳಗೆ ಬರುತ್ತಿರುವುದು, ವೀಡಿಯೊಗಳು ಹೊರಗೆ ಹೋಗುತ್ತಿರುವುದು ಇದು ಗಂಭೀರ ಸಮಸ್ಯೆಯಾಗಿದೆ. ಉಗ್ರರು, ಕೊಲೆಗಾರರು ಜೈಲಿನೊಳಗೇ ಹೈಟೆಕ್ ಜೀವನ ನಡೆಸುತ್ತಿರುವುದು ಆತಂಕಕಾರಿಯಾಗಿದೆ. ಇದರ ಹಿಂದೆ ಯಾರು? ಜೈಲು ಸಿಬ್ಬಂದಿ ತೊಡಗಿಸಿಕೊಂಡಿದ್ದಾರಾ? ಎಂಬ ಪ್ರಶ್ನೆಗಳು ಎದ್ದಿವೆ. ಸರ್ಕಾರ ಈಗ ಎಚ್ಚರಿಕೆಯಿಂದಿರಬೇಕು.
ಜೈಲುಗಳಲ್ಲಿ ಮೊಬೈಲ್ ಸ್ಮಗ್ಲಿಂಗ್ ತಡೆಯಲು ಕಠಿಣ ನಿಯಮಗಳು ಬೇಕು. ಸಿಸಿಟಿವಿ, ಜ್ಯಾಮರ್‌ಗಳು, ಆಗಾಗ ಸರ್ಚ್ ಆಪರೇಷನ್ ಇವೆಲ್ಲಾ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜೈಲು ಶಿಕ್ಷೆಯ ಸ್ಥಳವೇ ಹೊರತು ಪಾರ್ಟಿ ಸ್ಥಳವಲ್ಲ. ಈ ಪ್ರಕರಣದ ತನಿಖೆ ಯಾವ ಹಂತಕ್ಕೆ ಬರುತ್ತದೆ? ಮೊಬೈಲ್ ಸಪ್ಲೈ ಚೈನ್ ಯಾರದು? ಇದರ ಹಿಂದೆ ದೊಡ್ಡ ಜಾಲವಿದೆಯಾ? ಉತ್ತರಕ್ಕಾಗಿ ಕಾಯಬೇಕು. ಆದರೆ ಒಂದು ಸತ್ಯ ಸ್ಪಷ್ಟ ಅದೇನೆಂದರೆ ಜೈಲು ಸುಧಾರಣೆ ಅಗತ್ಯವಿದೆ.
ಜೈಲಲ್ಲಿ ಬಿಂದಾಸ್ ಲೈಫ್ ಎಂಜಾಯ್ ಮಾಡಿದವರಿಗೆ ಬಿಗ್ ಶಾಕ್! ಅಧಿಕಾರಿಗಳಿಂದ ಸಕ್ಕತ್ ಕ್ಲಾಸ್
